
ಭಟ್ಕಳ: ತಾಲ್ಲೂಕಿನ ಶೆಟ್ಟಿ ಗ್ಯಾರೇಜ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಸು ಅಡ್ಡ ಬಂದ ಪರಿಣಾಮ ನಾಲ್ಕು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು, ನಂತರ ಎಲ್ಲ ವಾಹನಗಳೂ ರಸ್ತೆ ಬದಿಯಲ್ಲಿರುವ ಇಳಿಜಾರಿನೊಳಗೆ ಜಾರಿಬಿದ್ದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೇರಳದಿಂದ ಮಹಾರಾಷ್ಟ್ರದ ಕಡೆಗೆ ಸಾಗುತ್ತಿದ್ದ ಕಾರಿನ ಮುಂದೆ ಏಕಾಏಕಿ ಒಂದು ಹಸು ಕಾಣಿಸಿಕೊಂಡಿದೆ. ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವ ವೇಳೆ ಚಾಲಕ ಗಾಬರಿಗೊಂಡು ವಾಹನವನ್ನು ಒಂದು ಬದಿಗೆ ತಿರುಗಿಸಿದ್ದಾನೆ.
ಈ ಸಂದರ್ಭದಲ್ಲಿ ಕಾರು ಮೊದಲು ಗೂಡ್ಸ್ ಅಟೊ ರಿಕ್ಷಾಗೆ ಡಿಕ್ಕಿ ಹೊಡೆದು, ನಂತರ ಹೊಸದಾಗಿ ಖರೀದಿಸಿದ ಬೊಲೆರೊ ಪಿಕ್‌ಅಪ್‌ಗೆ ಹಾಗೂ ನಂತರ ದುರಸ್ತಿ ಮುಗಿಸಿ ಗ್ಯಾರೇಜ್‌ನಿಂದ ಹೊರಬಂದ ಇನ್ನೊಂದು ಪಿಕ್‌ಅಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ವಾಹನಗಳ ವೇಗ ಸೂಚಿಸುವ ಸೈನ್‌ಬೋರ್ಡ್‌ನ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಎಲ್ಲಾ ವಾಹನಗಳು ರಸ್ತೆ ಕೆಳಗಿನ ಇಳಿಜಾರಿನೊಳಗೆ ಜಾರಿಬಿದ್ದವು. ಆಶ್ಚರ್ಯದ ಸಂಗತಿಯೆಂದರೆ, ಅಪಘಾತಕ್ಕೆ ಕಾರಣವಾದ ಹಸು ಯಾವುದೇ ಗಾಯವಿಲ್ಲದೆ ಸುರಕ್ಷಿತವಾಗಿ ಅಲ್ಲಿಂದ ದಾಟಿಕೊಂಡಿತು.
ಕಾರಿನಲ್ಲಿ ಕೇರಳದ ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ ಗೂಡ್ಸ್ ಆಟೋ ರಿಕ್ಷಾ ಚಾಲಕನಿಗೆ ಸಣ್ಣ ಮಟ್ಟದ ಗಾಯಗಳಾಗಿವೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.