
ಭಟ್ಕಳ: ಭಟ್ಕಳ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಿಗ್ಗೆ ಬಂದಂತಹ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಮೇಲ್ ಸಂದೇಶ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ‘ತಮಿಳರು ಹಾಗೂ ಪಾಕಿಸ್ತಾನಿಗಳ ಸೇಡು – ತಹಶೀಲ್ದಾರ್ ಕಚೇರಿಯಲ್ಲಿ ಶೀಘ್ರದಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ. ಎಲ್ಲರನ್ನೂ ತಕ್ಷಣ ತೆರವುಗೊಳಿಸಿ’ ಎಂಬ ಶೀರ್ಷಿಕೆಯನ್ನು ಕನ್ನಡದಲ್ಲಿ ಉಲ್ಲೇಖಿಸಿ, ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ ಎಂಬ ಈ–ಮೇಲ್ ಐಡಿಯಿಂದ ಬೆಳಿಗ್ಗೆ 7.25ರ ಸುಮಾರಿಗೆ ದುಷ್ಕರ್ಮಿಯೊಬ್ಬರು ಸಂದೇಶ ರವಾನಿಸಿದ್ದರು..
ಬಾಂಬ್ ಸ್ಫೋಟದ ಬೆದರಿಕೆಯೊಂದಿಗೆ, ಮೇಲ್ ಬಾಡಿಯಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನೂ ಉಲ್ಲೇಖಿಸಲಾಗಿದೆ. 2001ರಲ್ಲಿ ಮಾಧ್ಯಮಗಳ ಮೇಲೆ ದಬ್ಬಾಳಿಕೆ ನಡೆಸಲು ಯತ್ನಿಸಲಾಗಿದೆ, ಗೆಲಿಲಿಯೋ ಆ್ಯಪ್ ಮೂಲಕ ಕನ್ನಡಿಗರ ಮೇಲೆ ಗೂಢಾಚಾರ ನಡೆದಿದೆ ಎನ್ನುವ ಆರೋಪಗಳನ್ನೂ ಮೇಲ್‌ನಲ್ಲಿ ಬರೆಯಲಾಗಿದೆ. ಅಲ್ಲದೆ, ಅನಾಥಾಶ್ರಮಗಳ ಹೆಣ್ಣುಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಗಂಭೀರ ಹಾಗೂ ಆಧಾರರಹಿತ ಆರೋಪಗಳನ್ನೂ ಸಹ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಕಾರವಾರದಿಂದ ಆಗಮಿಸಿದ ಬಾಂಬ್ ನಿಷ್ಕ್ರೀಯ ಹಾಗೂ ಶ್ವಾನ ದಳದಿಂದ ಕಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿತು. ಶಹರ ಪೊಲೀಸ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಈ ಹಿಂದೆ ಶಹರ ಪೊಲೀಸ್ ಠಾಣೆ ಸ್ಪೋಟಿಸುವದಾಗಿ ಹುಸಿ ಮೇಲ್ ಸಂದೇಶವನ್ನು ಶಹರ ಠಾಣೆಗೆ ರವಾನಿಸಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದ ಪೊಲೀಸರು ತಮಿಳುನಾಡು ಮೂಲದ ವ್ಯಕ್ತಿಯನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.