ADVERTISEMENT

ಭಟ್ಕಳ: 8 ವರ್ಷ ಕಳೆದರೂ ಪೂರ್ಣಗೊಳ್ಳದ ‘ಪುರಭವನ’

ಅನುದಾನ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಆರೋಪ: ಕೆಲಸವೂ ಸ್ಥಗಿತ

ಮೋಹನ ನಾಯ್ಕ
Published 29 ಜುಲೈ 2025, 7:36 IST
Last Updated 29 ಜುಲೈ 2025, 7:36 IST
ಭಟ್ಕಳ ಸಾಗರ ರಸ್ತೆಯಲಿ ನಿರ್ಮಾಣ ಹಂತದಲ್ಲಿರುವ ಪುರಭವನ ಕಟ್ಟಡ
ಭಟ್ಕಳ ಸಾಗರ ರಸ್ತೆಯಲಿ ನಿರ್ಮಾಣ ಹಂತದಲ್ಲಿರುವ ಪುರಭವನ ಕಟ್ಟಡ   

ಭಟ್ಕಳ: ಪಟ್ಟಣದ ಸಾಗರ ರಸ್ತೆಯಲ್ಲಿ ಎಂಟು ವರ್ಷಗಳ ಹಿಂದೆಯೇ ಆರಮಭಗೊಂಡಿದ್ದ ಪುರಭವನ ಕಟ್ಟಡ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

‘ಅನುದಾನದ ಕೊರತೆ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕಟ್ಟಡ ನಿರ್ಮಾಣ ಕೆಲಸ ನನೆಗುದಿಗೆ ಬಿದ್ದಿದೆ. ಸಾರ್ವಜನಿಕರ ಉಪಯೋಗಕ್ಕೆ ಸಿಗಬೇಕಿದ್ದ ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲೇ ಉಳಿದುಕೊಂಡಿದೆ’ ಎಂಬುದು ಸಾರ್ವಜನಿಕರ ಆರೋಪ.

ಸಾರ್ವಜನಿಕ ಸಭೆ ಸಮಾರಂಭ ಹಾಗೂ ತಾಲ್ಲೂಕು ಆಡಳಿತದಿಂದ ನಡೆಸಬಹುದಾದ ಸರ್ಕಾರಿ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಪಟ್ಟಣದ ಹೃದಯಭಾಗವಾದ ಸಾಗರ ರಸ್ತೆಯಲ್ಲಿ ಎರಡು ಅಂತಸ್ತಿನ ಪುರಭವನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಎಂಟು ವರ್ಷದ ಹಿಂದೆ ಅಂದಾಜು ₹2 ಕೋಟಿ ವೆಚ್ಚದ ಯೋಜನೆಯಾಗಿ ಕಾಮಗಾರಿ ಆರಂಭಿಸಲಾಗಿತ್ತು.

ADVERTISEMENT

‘ಪುರಸಭೆಯ ಅಂದಾಜು ₹2 ಕೋಟಿ ಅನುದಾನದಲ್ಲಿ ಮೂರು ಹಂತದಲ್ಲಿ ಕಾಮಗಾರಿ ನಡೆಸಿ, ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡದ ಒಳಮೇಲ್ಮೈ ಕಾಮಗಾರಿ ಸೇರಿದಂತೆ ಅಂತಿಮ ಹಂತಹ ಕಾಮಗಾರಿ ಬಾಕಿ ಇದ್ದು, ಹೆಚ್ಚುವರಿಯಾಗಿ ಅಂದಾಜು ₹3 ಕೋಟಿ ಅನುದಾನ ಅಗತ್ಯ ಇದೆ’ ಎನ್ನುತ್ತಾರೆ ಪುರಸಭೆಯ ಅಧಿಕಾರಿಗಳು.

‘ಸಭೆ, ಸಮಾರಂಭ ನಡೆಸಲು ಖಾಸಗಿ ಸಭಾಭವನಗಳನ್ನೆ ಅವಲಂಭಿಸಬೇಕಾಗಿದೆ. ಮದುವೆ, ಮುಂಜಿ ಮುಂತಾದ ಕಾರ್ಯಕ್ರಮ ನಡೆಸಲು ತಾಲ್ಲೂಕಿನಲ್ಲಿರುವ ಖಾಸಗಿ ಸಮುದಾಯ ಭವನಗಳನ್ನು ಬಾಡಿಗೆಗೆ ಪಡೆದರೆ ದಿನಕ್ಕೆ ₹35 ರಿಂದ 40 ಸಾವಿರ ಶುಲ್ಕ ಪಡೆಯಲಾಗುತ್ತದೆ. ಇಷ್ಟು ಮೊತ್ತದ ಬಾಡಿಗೆ ಭರಿಸುವುದು ಬಡವರಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಕಷ್ಟಸಾಧ್ಯ. ಪುರಸಭೆಯ ಪುರಭವನ ಕಾಮಗಾರಿ ಪೂರ್ಣವಾದರೇ, ಸಾರ್ವಜನಿಕರಿಗೂ ಕಡಿಮೆ ಮೊತ್ತದಲ್ಲಿ ಉತ್ತಮ ಸಭಾಭವನ ಪಡೆದು ಕಾರ್ಯಕ್ರಮ ನಡೆಸಿದ ತೃಪ್ತಿ ಇರುತ್ತದೆ’ ಎನ್ನುತ್ತಾರೆ ಪುರಸಭೆ ಮಾಜಿ ಸದಸ್ಯ ಶ್ರೀಕಾಂತ ನಾಯ್ಕ ಆಸರಕೇರಿ.

‘ಹಣ ಪೋಲಾದಂತೆ’

‘ಪುರಭವನ ಕಾಮಗಾರಿ ನಿರೀಕ್ಷಿತ ಅವಧಿಯಲ್ಲಿ ಮಗಿದಿದಿದ್ದರೆ ಇಲ್ಲಿ ಕಾರ್ಯಕ್ರಮ ನಡೆಸಲು ಪಡೆಯುವ ಬಾಡಿಗೆಯಿಂದ ತಕ್ಕಮಟ್ಟಿಗಿನ ಆದಾಯ ಸಿಗುತ್ತಿತ್ತು. ಪುರಸಭೆಯವರ ವಿಳಂಬ ಕಾಮಗಾರಿಯಿಂದಾಗಿ ಕಟ್ಟಡ ಪೂರ್ಣಗೊಂಡಿಲ್ಲದಿರುವುದು ಒಂದೆಡೆಯಾದರೆ ಗೋಡೆಗಳು ಮಳೆ ನೀರು ಕುಡಿದು ಶಿಥಿಲಾವಸ್ಥೆ ತಲುಪುತ್ತಿವೆ. ಈ ಕಟ್ಟಡ ಪೂರ್ಣಗಳಿಸದೆ ಹಾಗೆ ಬಿಟ್ಟರೆ ಪಾಳು ಬಿದ್ದ ಕಟ್ಟಡವಾಗಲಿದೆ. ಈಗಾಗಲೆ ಕಟ್ಟಡ ನಿರ್ಮಾಣಕ್ಕೆ ಮಾಡಿದ ವೆಚ್ಚವೂ ಪೋಲಾದಂತಾಗುತ್ತದೆ’ ಎಂದು ಶ್ರೀಕಾಂತ ನಾಯ್ಕ ಆಸರಕೇರಿ ದೂರಿದರು.

ಪುರಸಭೆಯ ಅನುದಾನದಲ್ಲಿ ಹಂತಹಂತವಾಗಿ ಕಾಮಗಾರಿ ನಡೆಸಲಾಗುತ್ತಿದ್ದು ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹3 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
-ಅರವಿಂದ್ ರಾವ್, ಪುರಸಭೆಯ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.