
ಭಟ್ಕಳ: ಭಟ್ಕಳವನ್ನು ಹಸಿರಾಗಿಸಿ ಪರಿಸರ ಸ್ನೇಹಿ ನಗರವನ್ನಾಗಿಸುವ ಉದ್ದೇಶದಿಂದ ಇಂಡಿಯನ್ ನವಾಯತ್ ಫೋರಂ ಬುಧವಾರ ನವಾಯತ್ ಕಾಲೊನಿಯ ಮುಹಿಯುದ್ದೀನ್ ಮುನೀರಿ ರಸ್ತೆಯ ಸೆಂಟ್ರಲ್ ಮೀಡಿಯನ್‌ನಲ್ಲಿ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಭಟ್ಕಳವನ್ನು ಸಂಪೂರ್ಣ ಹಸಿರಾಗಿ ಉಳಿಸಿಕೊಳ್ಳುವುದು ಎಲ್ಲ ನಾಗರಿಕರ ಹೊಣೆಗಾರಿಕೆಯಾಗಿದೆ. ಮರಗಳ ಸಂರಕ್ಷಣೆ ಮತ್ತು ಪೋಷಣೆ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.ವೃಕ್ಷಾರೋಪಣೆಯಂತಹ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು’ ಎಂದರು.
ಐಎನ್‌ಎಫ್ ಅಧ್ಯಕ್ಷ ಅಫ್ತಾಬ್ ಹುಸೇನ್ ಕೋಲಾ ಮಾತನಾಡಿ, ‘ವೃಕ್ಷಾರೋಪಣೆಯ ಮೂಲಕ ಸ್ವಚ್ಛ ಪರಿಸರ ನಿರ್ಮಿಸಿ ಸಾರ್ವಜನಿಕರಿಗೆ ಶುದ್ಧ ಆಮ್ಲಜನಕ ಒದಗಿಸುವುದೇ ಈ ಅಭಿಯಾನದ ಮುಖ್ಯ ಗುರಿಯಾಗಿದೆ. ನಗರದ ಸೌಂದರ್ಯವರ್ಧನೆಗೂ ಇದು ಸಹಕಾರಿಯಾಗಲಿದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಪ್ರಕೃತಿ ಸಂಪನ್ಮೂಲಗಳ ಅತಿಯಾದ ದುರುಪಯೋಗದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಎಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ, ಭಟ್ಕಳ ಕಾಜಿ ಮೌಲಾನಾ ಖ್ವಾಜಾ ಅಕ್ರಮಿ ಮದನಿ ಮಾತನಾಡಿದರು. ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಭಟ್ಕಳ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯೂನುಸ್ ಕಾಜಿಯಾ, ರಾಬಿತಾ ಸೊಸೈಟಿಯ ಅಧ್ಯಕ್ಷ ಉಮರ್ ಫಾರೂಕ್ ಮಿಸ್ಬಾಹ್, ಹಾಗೂ ಪ್ರಧಾನ ಕಾರ್ಯದರ್ಶಿ ಅತೀಕ್ ಮುನೀರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.