ADVERTISEMENT

ಪ್ರಕೃತಿಯ ಸೋಜಿಗ ‘ಭೀಮನ ಬುಗುರಿ’

ಸಾವನಾಳ ಗ್ರಾಮದಲ್ಲೊಂದು ಚಾರಣಪ್ರೀಯರ ಪಾಲಿನ ನೆಚ್ಚಿನ ತಾಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 4:39 IST
Last Updated 15 ಸೆಪ್ಟೆಂಬರ್ 2024, 4:39 IST
ಕಾರವಾರ ತಾಲ್ಲೂಕಿನ ಸಾವನಾಳ ಗ್ರಾಮದ ಪರ್ವತದ ತುದಿಯಲ್ಲಿರುವ ಭೀಮನ ಬುಗುರಿ ಕಲ್ಲು ಚಿತ್ರ:ರವಿ ಗೌಡ
ಕಾರವಾರ ತಾಲ್ಲೂಕಿನ ಸಾವನಾಳ ಗ್ರಾಮದ ಪರ್ವತದ ತುದಿಯಲ್ಲಿರುವ ಭೀಮನ ಬುಗುರಿ ಕಲ್ಲು ಚಿತ್ರ:ರವಿ ಗೌಡ   

ಕಾರವಾರ: ಅಂಕೋಲಾ ಕಡೆಯಿಂದ ಕಾರವಾರದತ್ತ ಬರುವಾಗ ಸಾಲು ಪರ್ವತವೇ ಕಾಣಸಿಗುತ್ತದೆ. ಅಂಥ ಪರ್ವತವೊಂದರ ಮೇಲೆ ದೊಡ್ಡ ಗಾತ್ರದ ಬಂಡೆಯೊಂದು ನಿಂತಿರುವುದು ಬಹುದೂರದವರೆಗೂ ಗೋಚರಿಸುತ್ತದೆ. ಹೀಗೆ ಗೋಚರಿಸುವ ಬಂಡೆಯು ಒಂದು ಕಾಲದಲ್ಲಿ ಭೀಮ ಆಡಿಸುತ್ತಿದ್ದ ಬುಗುರಿ!

ತಾಲ್ಲೂಕಿನ ತೊಡೂರು ಗ್ರಾಮದ ಅಂಚಿನಲ್ಲಿರುವ ದಟ್ಟ ಅಡವಿಯಿಂದ ಹಾದು, ಗುಡ್ಡ ಏರಿ ಹೊರಟರೆ ಅಲ್ಲಿ ಸಿಗುವ ಸಾವನಾಳ ಎಂಬ ಒಂಟಿ ಮನೆಯ ಗ್ರಾಮದ ತುತ್ತತುದಿಯಲ್ಲಿ ಈ ಬಂಡೆಕಲ್ಲು ಕಾಣಸಿಗುತ್ತದೆ. ಸಮತಟ್ಟಾದ ಕಲ್ಲುಹಾಸಿನ ಮೇಲೆ ಈ ಬೃಹತ್ ಗಾತ್ರದ ಬಂಡೆ ಸ್ಥಿರವಾಗಿ ನೂರಾರು ವರ್ಷಗಳಿಂದ ನಿಂತಿದೆ.

‘ಪಾಂಡವರು ವನವಾಸಕ್ಕೆ ಬಂದಿದ್ದ ವೇಳೆ ಭೀಮ ಗುಡ್ಡದ ಮೇಲೆ ಕುಳಿತು ಬುಗುರಿ ರೀತಿ ಆಡಿಸುತ್ತಿದ್ದ ಕಲ್ಲು ಇದಾಗಿತ್ತು. ಇಲ್ಲಿಂದ ಮರಳುವಾಗ ಕಲ್ಲನ್ನು ಇಲ್ಲಿಯೇ ಬಿಟ್ಟು ಹೋದರು’ ಎಂಬುದಾಗಿ ಸ್ಥಳೀಯರು ಜನಪದ ಕಥೆಯನ್ನು ಹೇಳುತ್ತಾರೆ.

ADVERTISEMENT

‘ಗ್ರಾಮೀಣ ಭಾಗದಲ್ಲಿ ಯಾವುದೇ ದೊಡ್ಡ ಗಾತ್ರದ ವಸ್ತು ನೋಡಿದರೆ ಭೀಮಗಾತ್ರದ್ದು ಎಂಬ ವಿಶ್ಲೇಷಣ ಬಳಕೆ ರೂಢಿ. ಬಂಡೆಕಲ್ಲಿನ ಗಾತ್ರದ ಕಾರಣದಿಂದ ಇದಕ್ಕೆ ಭೀಮನ ಬುಗುರಿ ಎಂಬ ಹೆಸರು ಬಂದಿರಬಹುದು’ ಎಂಬುದಾಗಿ ಗ್ರಾಮದ ಹಿರಿಯರೊಬ್ಬರು ಹೇಳಿದರು.

ಕಾರವಾರ ನಗರದಿಂದ ಸುಮಾರು 23 ಕಿ.ಮೀ ದೂರದಲ್ಲಿರುವ ಭೀಮನ ಬುಗುರಿ ಚಾರಣಪ್ರೀಯರ ಪಾಲಿಗೆ ನೆಚ್ಚಿನ ತಾಣವಾಗಿದೆ. ಗುಡ್ಡದ ಮೇಲೆ ಲಂಬಕೋನ ಆಕಾರದಲ್ಲಿ ನಿಂತಿರುವ ಸುಮಾರು 30 ಅಡಿ ಎತ್ತರದ ಕಲ್ಲನ್ನು ವೀಕ್ಷಿಸಲು ನೂರಾರು ಜನರು ಚಾರಣ ಮಾಡಿಕೊಂಡು ಸಾಗುತ್ತಿದ್ದಾರೆ. ತೊಡೂರು ಗ್ರಾಮದ ಸೀಬರ್ಡ್ ಕಾಲೊನಿಯಿಂದ ಐದು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದರೆ ಭೀಮನ ಬುಗುರಿ ವೀಕ್ಷಣೆ ಸಾಧ್ಯವಾಗುತ್ತದೆ.

‘ಚಾರಣದ ಸಾಹಸ ಮಾಡಬಯಸುವವರಿಗೆ ಈ ಸ್ಥಳ ಹೇಳಿ ಮಾಡಿಸಿದಂತಿದೆ. ನಡಿಗೆಯ ಮೂಲಕವೇ ಕಡಿದಾದ ಕಾಲುದಾರಿಯಲ್ಲಿ ಸಾಗುತ್ತ ಪರ್ವತ ಏರಬೇಕಾಗುತ್ತದೆ. ಸಾವನಾಳ ಗ್ರಾಮದಲ್ಲಿ ಕೃಷಿಕರ ಕುಟುಂಬವೊಂದು ನೆಲೆಸಿದ್ದು, ಅಗತ್ಯವಿದ್ದರೆ ಅವರಿಗೆ ಅಡುಗೆ ಸಾಮಗ್ರಿ ನೀಡಿ ಮುಂಚಿತವಾಗಿ ತಿಳಿಸಿದರೆ ಊಟದ ವ್ಯವಸ್ಥೆ ಕಲ್ಪಿಸಿಕೊಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಸ್ಥಳೀಯರು, ದೂರದ ಊರುಗಳ ಜನರು ಚಾರಣಕ್ಕೆ ಬರುತ್ತಾರೆ. ಚಾರಣಕ್ಕೆ ಸ್ಥಳೀಯರ ನೆರವು ಅಗತ್ಯವಾಗುತ್ತದೆ’ ಎನ್ನುತ್ತಾರೆ ತೊಡೂರು ಗ್ರಾಮದ ವೀರಭದ್ರ ಗೌಡ.

ಪ್ರವಾಸಿಗರಿಗೆ ಮಾಹಿತಿ ಇಲ್ಲ

‘ಭೀಮನ ಬುಗುರಿಗೆ ಚಾರಣಕ್ಕೆ ತೆರಳಲು ತೊಡೂರು ಮೂಲಕ ಸಾಗುವುದು ಸೂಕ್ತ ಮಾರ್ಗ. ಬೇಳೂರು ಮಾರ್ಗವಾಗಿಯೂ ಸಾವನಾಳ ಮೂಲಕ ಪರ್ವತ ಏರಲು ಸಮೀಪದ ದಾರಿ ಇದೆ. ಭೀಮನ ಬುಗುರಿ ಐತಿಹಾಸಿಕ ಹಿನ್ನೆಲೆಯ ಪ್ರವಾಸಿ ತಾಣವಾಗಿದ್ದರೂ ಈವರೆಗೆ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಲ್ಲ. ಹೀಗಾಗಿ ಪ್ರವಾಸಿಗರಿಗೆ ಈ ಸ್ಥಳದ ಬಗ್ಗೆ ಮಾಹಿತಿ ಇಲ್ಲ. ಸ್ಥಳೀಯರ ಪ್ರಚಾರದ ಫಲವಾಗಿ ಈಚಿನ ವರ್ಷದಲ್ಲಿ ದೂರದ ಊರುಗಳಿಂದಲೂ ಯುವಕ ಯುವತಿಯರು ಈ ಸ್ಥಳಕ್ಕೆ ಚಾರಣಕ್ಕೆ ಬರುತ್ತಿದ್ದಾರೆ’ ಎನ್ನುತ್ತಾರೆ ಚಾರಣಿಗ ರವಿ ಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.