ADVERTISEMENT

ಭೂಮಿ ಹುಣ್ಣಿಮೆ ಹಬ್ಬ: ಭೂತಾಯಿಗೆ ಪೂಜೆ ಸಲ್ಲಿಸಿದ ಅನ್ನದಾತರು

ಹೊಲದಲ್ಲಿ ಚರಗ ಬೀರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 7:31 IST
Last Updated 13 ಅಕ್ಟೋಬರ್ 2019, 7:31 IST
ಹೊಲದಲ್ಲಿ ಬೆಳೆಗೆ ಪೂಜೆ ಸಲ್ಲಿಸಿದ ರೈತರು
ಹೊಲದಲ್ಲಿ ಬೆಳೆಗೆ ಪೂಜೆ ಸಲ್ಲಿಸಿದ ರೈತರು   

ಶಿರಸಿ: ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ಮಣ್ಣಿನ ಮಕ್ಕಳು ಭಾನುವಾರ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹೊಲದಲ್ಲಿ ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿದ ಅನ್ನದಾತರು, ಬದುಕು ಹಸನಾಗಲಿರಲೆಂದು ಪ್ರಾರ್ಥಿಸಿಕೊಂಡರು.

ಭೂಮಿ ಹುಣ್ಣಿಮೆ ಮಲೆನಾಡಿನ ಹಳ್ಳಿಗರಿಗೆ ವಿಶೇಷ ಹಬ್ಬ. ಅದರಲ್ಲೂ ಗದ್ದೆ, ತೋಟ ಹೊಂದಿರುವವರಿಗೆ ಈ ದಿನ ಹೊಸ ಸಡಗರ. ನಸುಕಿನಿಂದಲೇ ಹಬ್ಬದ ಸಿದ್ಧತೆಗಳು ಆರಂಭವಾಗುತ್ತವೆ. ವಿವಿಧ ಜಾತಿಯ ಸೊಪ್ಪನ್ನು ಬೆಟ್ಟದಿಂದ ಕೊಯ್ದು ತರುವ ರೈತರು ಅದನ್ನು ಬೇಯಿಸುತ್ತಾರೆ. ಇದರ ಮಿಶ್ರಣಕ್ಕೆ ‘ಚರಗ’ ಎನ್ನುತ್ತಾರೆ. ಈ ಮಿಶ್ರಣವನ್ನು ಗದ್ದೆಗೆ ಬಿತ್ತಿ ಒಳ್ಳೆಯ ಬೆಳೆ ಬರಲಿ ಎಂದು ಪ್ರಾರ್ಥಿಸುತ್ತಾರೆ. ಈ ವಿಧಾನಗಳೆಲ್ಲ ಮುಗಿದ ಮೇಲೆ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸುತ್ತಾರೆ.

ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಭತ್ತ ಕೃಷಿಕರೇ ಹೆಚ್ಚು. ಅಂಡಗಿ, ಮಧುರವಳ್ಳಿ, ಕಂಡ್ರಾಜಿ, ಕಲಕರಡಿ, ಹೆಬ್ಬತ್ತಿ, ಮಾಳಂಜಿ, ರಾಮಾಪುರ, ಗುಡ್ನಾಪುರ, ಬಿಸಲಕೊಪ್ಪ, ಮಳಲಗಾಂವ ಮೊದಲಾದ ಹಳ್ಳಿಗಳಲ್ಲಿ ರೈತರು ಹೊಲಕ್ಕೆ ಚರಗ ಬಿತ್ತಿದರು. ಗೋವೆಕಾಯಿ ಕಡಬು, ಕೊಸಂಬರಿ, ಮೊಸರನ್ನವನ್ನು ದೇವಿಗೆ ದೈವೇದ್ಯ ಮಾಡಿ, ಕುಟುಂಬ ಸಮೇತರಾಗಿ ವಿಶೇಷ ಭೋಜನ ಸವಿದರು.

ADVERTISEMENT
ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಆಚರಣೆ

ಅಡಿಕೆ ತೋಟ ಹೊಂದಿರುವ ಕೃಷಿಕರು ಅಡಿಕೆ ಮರಗಳಿಗೆ ಹಬ್ಬದಂದು ಶೇಡಿ, ಕೆಮ್ಮಣ್ಣಿನ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಾರೆ. ಎಡೆ ಪ್ರಸಾದಕ್ಕೆ ಭೂಮಿ ಪೂಜೆಯಲ್ಲಿ ವಿಶೇಷ ಪ್ರಾಧಾನ್ಯತೆ ಇರುತ್ತದೆ. ಮೊಸರನ್ನ, ಹಾಲನ್ನ, ತುಪ್ಪದ ಅನ್ನ ಹಾಗೂ ಚಿತ್ರಾನ್ನದ ಜೊತೆಗೆ ಲಿಂಬೆ ಹಣ್ಣನ್ನು ಕುಡಿ ಬಾಳೆಯಲ್ಲಿಟ್ಟು ಸಿದ್ಧಪಡಿಸಿ ಭೂಮಿಗೆ ಅರ್ಪಿಸುತ್ತಾರೆ.

ಸ್ಥಳೀಯವಾಗಿ ಕರೆಯುವ ಹತ್ತೊಂಬರವೆ, ಗೋವೆಕಾಯಿ, ಬೂದುಗುಂಬಳ, ಹೀರೆಕಾಯಿ ಸೊಪ್ಪನ್ನು ಬೇಯಿಸಿ ಸಿದ್ಧಪಡಿಸಿದ ಮಿಶ್ರಣವನ್ನು ಗದ್ದೆ ಹಾಗೂ ತೋಟದಲ್ಲಿ ಸಿಂಪಡಿಸಿ ಪೂಜಿಸುವ ಪದ್ಧತಿ ಬಹುತೇಕ ಎಲ್ಲ ತೋಟಿಗರ ಮನೆಯಲ್ಲಿ ಆಚರಣೆಯಲ್ಲಿದೆ. ಭೂಮಿ ಹುಣ್ಣಿಮೆಯ ದಿನ ಭೂಮಿಯನ್ನು ನೋಯಿಸಬಾರದು. ನೆಲಕ್ಕೆ ಕತ್ತಿಯನ್ನು ಊರಬಾರದು ಎಂಬ ನಂಬಿಕೆ ಇರುವುದರಿಂದ ಕೃಷಿ ಕಾಯಕಕ್ಕೆ ಬಿಡುವು ಕೊಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.