ಶಿರಸಿ: ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ಮಣ್ಣಿನ ಮಕ್ಕಳು ಮಂಗಳವಾರ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕೃಷಿಕರು ನಸುಕಿನಿಂದಲೇ ಹಬ್ಬದ ಸಿದ್ಧತೆ ಆರಂಭಿಸಿ, ವಿವಿಧ ಜಾತಿಯ ಸೊಪ್ಪನ್ನು ಬೆಟ್ಟದಿಂದ ಕೊಯ್ದು ತಂದು ಬೇಯಿಸಿದರು. ಇದರ ಮಿಶ್ರಣಕ್ಕೆ ‘ಚರಗ’ ಎನ್ನುತ್ತಾರೆ. ಈ ಮಿಶ್ರಣವನ್ನು ಗದ್ದೆಗೆ ಬಿತ್ತಿ, ಒಳ್ಳೆಯ ಬೆಳೆ ಬರಲಿ ಎಂದು ಪ್ರಾರ್ಥಿಸಿದರು. ಗೋವೆಕಾಯಿ ಕಡಬು, ಕೊಸಂಬರಿ, ಮೊಸರನ್ನವನ್ನು ದೇವಿಗೆ ದೈವೇದ್ಯ ಮಾಡಿ, ಕುಟುಂಬ ಸಮೇತರಾಗಿ ವಿಶೇಷ ಭೋಜನ ಸವಿದರು. ಅಡಿಕೆ ತೋಟ ಹೊಂದಿರುವ ಕೃಷಿಕರು ಅಡಿಕೆ ಮರಗಳಿಗೆ ಶೇಡಿ, ಕೆಮ್ಮಣ್ಣಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಎಡೆ ಪ್ರಸಾದವನ್ನು ಭೂಮಿಗೆ ಅರ್ಪಿಸಿದರು.
ಭೂಮಿ ಹುಣ್ಣಿಮೆಯ ದಿನ ಭೂಮಿಯನ್ನು ನೋಯಿಸಬಾರದು. ನೆಲಕ್ಕೆ ಕತ್ತಿಯನ್ನು ಊರಬಾರದು ಎಂಬ ನಂಬಿಕೆ ಇರುವುದರಿಂದ ಕೃಷಿ ಕಾಯಕಕ್ಕೆ ಬಿಡುವು ಕೊಡಲಾಗಿತ್ತು. ಶಾಸಕ ಭೀಮಣ್ಣ ನಾಯ್ಕ ಅವರು ಕುಟುಂಬಸ್ಥರ ಜತೆ ತಮ್ಮ ಅಡಿಕೆ ತೋಟದಲ್ಲಿ ಮರಗಳಿಗೆ ಪೂಜೆ ಸಲ್ಲಿಸಿ, ರೈತರ ಬಾಳು ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.