ಕಾರವಾರ:ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮದ ಕುಂಟಗಣಿ ಹೊಳೆಯ ಸೇತುವೆಯ ಕಂಬಗಳಿಗೆ ಅಡ್ಡಲಾಗಿ ಸಿಲುಕಿದ್ದ ಬೃಹತ್ ಮರವನ್ನು ಶನಿವಾರ ತೆರವು ಮಾಡಲಾಯಿತು. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಮತ್ತು ಕುಂಟಗಣಿ ಗ್ರಾಮಸ್ಥರು ಜೊತೆಗೂಡಿ ಕಾರ್ಯಾಚರಣೆ ನಡೆಸಿದರು.
ಹೊಳೆಯಲ್ಲಿ ನೀರಿನ ಹರಿವನ್ನು ಲೆಕ್ಕಿಸದೇ ದಿನಪೂರ್ತಿ ಪ್ರಯಾಸಪಟ್ಟು ಮರವನ್ನು ಸೇತುವೆಯ ಕಂಬಗಳಿಂದ ಬಿಡಿಸಲಾಯಿತು. ಈ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಟ್ಟು, ಸೇತುವೆಗೆ ಒದಗಿದ್ದ ಅಪಾಯವನ್ನು ದೂರ ಮಾಡಲಾಯಿತು. ಸುಮಾರು 30 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ ಈ ಸೇತುವೆಯು 120 ಮನೆಗಳಿಗೆಸಂಪರ್ಕ ಕೊಂಡಿಯಾಗಿದೆ. ಕಾಡಿನಲ್ಲಿ ಮುರಿದು ಬಿದ್ದ ಮರವು ಈ ಹಿಂದೆ ಹರಿದ ಭಾರಿ ಪ್ರಮಾಣದ ನೀರಿನಲ್ಲಿ ತೇಲಿಬಂದು ಸೇತುವೆಯ ಕಂಬಗಳಿಗೆ ಸಿಲುಕಿತ್ತು.ಈ ಬಗ್ಗೆ ‘ಪ್ರಜಾವಾಣಿ’ಯ ಜುಲೈ 19ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಮರದ ತೆರವು ಕಾರ್ಯದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅಶೋಕ ಭಂಟ್, ಗ್ರಾಮದ ಶ್ರೀಧರ ಹೆಗಡೆ, ನಾಗರಾಜ ಹೆಗಡೆ, ಮಹಾಬಲೇಶ್ವರ ಹೆಗಡೆ, ರಾಜೇಶ ನಾಯಕ, ಗಣಪತಿ ಗೌಡ, ಮೋಹನ ಸಿದ್ದಿ, ಲತೀಶ ನಾಯಕ (ಬಾಬು), ಗೋಪಾಲ ನಾಯಕ, ಶ್ರೀನಿವಾಸ ನಾಯಕ ಹಾಗೂಊರ ನಾಗರಿಕರು ಕೈಜೋಡಿಸಿದರು ಎಂದು ಕುಂಟಗಣಿಯ ಜಾಗೃತಿ ಸಂಘದ ಬಾಲಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.