
ಕಾರವಾರ: ‘ನಗರ ಸ್ಥಳೀಯ ಸಂಸ್ಥೆಗಳು ಹೋಟೆಲ್, ರೆಸ್ಟೊರೆಂಟ್‌ಗಳಿಂದ ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಿಸಿ ಜೈವಿಕ ಘಟಕಕ್ಕೆ ಕಡ್ಡಾಯವಾಗಿ ಪೂರೈಸಲು ಆದೇಶಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರ ಹೇಳಿದರು.
ಇಲ್ಲಿನ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ಜೈವಿಕ ಇಂಧನ ಸಂಶೋಧನಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
‘ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಒಮ್ಮೆ ಬಳಸಿದ ಎಣ್ಣೆಯನ್ನು ನಗರ ಸ್ಥಳೀಯ ಸಂಸ್ಥೆಯವರು ಸಂಗ್ರಹಿಸಿದರೆ ಅಡುಗೆ ಎಣ್ಣೆಯ ಮರು ಬಳಕೆ ನಿಯಂತ್ರಿಸಬಹುದು. ಜೊತೆಗೆ ಇದನ್ನು ಜೈವಿಕ ಇಂಧನ ಬಳಕೆಗೆ ಬಳಸಿಕೊಳ್ಳಬಹುದು. ಇದರಿಂದ ಜೈವಿಕ ಇಂಧನ ಘಟಕಗಳಿಗೆ ಹೆಚ್ಚು ಕಚ್ಚಾ ವಸ್ತು ಸಿಕ್ಕಂತಾಗುತ್ತದೆ. ಜೈವಿಕ ಡೀಸೆಲ್, ಗ್ಲಿಸರಿನ್ ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುತ್ತದೆ’ ಎಂದರು.
‘ಜೈವಿಕ ಇಂಧನ ಉತ್ಪಾದನೆಗೆ ಹೊಂಗೆ ಬೀಜ ಸೇರಿದಂತೆ ಉತ್ತರ ಕನ್ನಡದ ಅರಣ್ಯದಲ್ಲಿ ಸಿಗುವ ಹಲವು ಕಿರು ಅರಣ್ಯ ಉತ್ಪನ್ನಗಳು ಕಚ್ಚಾವಸ್ತು ಆಗಲಿದೆ. ಅಂತಹವುಗಳ ಸಂಗ್ರಹಕ್ಕೆ ಅಥವಾ ಹೊಂಗೆ ಸಸಿಗಳನ್ನು ಬೆಳೆಸಿ ರೈತರು ಉತ್ಪನ್ನ ಸಂಗ್ರಹಿಸಲು ಅನುಕೂಲವಾದರೆ ಅವರಿಗೆ ಸಹಾಯಧನ, ಹೊಂಗೆಬೀಜ ಖರೀದಿಗೆ ಉತ್ತಮ ದರ ಒದಗಿಸಲು ಅವಕಾಶ ಆಗಲಿದೆ. ಇದರಿಂದ ಆರ್ಥಿಕ ಉತ್ತೇಜನವೂ ಸಿಕ್ಕಂತಾಗುತ್ತದೆ’ ಎಂದರು.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿನ ವಿವಿಧ ವಿಭಾಗಗಳನ್ನು ವೀಕ್ಷಿಸಿ, ಮಾಹಿತಿ ಸಂಗ್ರಹಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಎಂ.ಎಸ್.ಅಲ್ಲಾಭಕ್ಷ್, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ನಾಯ್ಕ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಂಯೋಜಕ ರೋಹನ್ ಬುಜಲೆ, ಸಿಬ್ಬಂದಿ ನಿಧಿ ನಾಯಕ, ಕವಿತಾ ಮೇಸ್ತ, ರಾಘು ಗುನಗಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಿಗೆ ತರಬೇತಿ
‘ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿನ ಜೈವಿಕ ಇಂಧನ ಸಂಶೋಧನಾ ಕೇಂದ್ರದಲ್ಲಿ ಜಿಲ್ಲೆಯ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜೈವಿಕ ಇಂಧನ ತಯಾರಿಕೆ ಕುರಿತು ಉಚಿತ ತರಬೇತಿ ನೀಡುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಜೈವಿಕ ಇಂಧನದ ಕುರಿತು ಶಿಕ್ಷಣ ಒದಗಿಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗುವುದು’ ಎಂದು ಇ.ಎಸ್.ಸುಧೀಂದ್ರ ಹೇಳಿದರು.
10 ಎಕರೆ ಜಾಗ ಅಗತ್ಯ
‘ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಜೈವಿಕ ಇಂಧನ ಸಂಶೋಧನಾ ಕೇಂದ್ರ ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಅವರೊಂದಿಗೆ ಚರ್ಚಿಸಲಾಗುವುದು. ಉನ್ನತೀಕರಿಸಿದ ಕೇಂದ್ರ ಸ್ಥಾಪಿಸಲು 10 ಎಕರೆ ಜಾಗ ಒದಗಿಸುವ ಬಗ್ಗೆ ಜಿಲ್ಲಾಧಿಕಾರಿ ಅವರಿಗೂ ಸೂಚಿಸಲಾಗಿದೆ. ವಿಜ್ಞಾನ ಕೇಂದ್ರದಲ್ಲಿ ರಾಜ್ಯದಲ್ಲೇ ಅಪರೂಪದ ತಿಮಿಂಗಲ ಅಸ್ತಿಪಂಜರ ಸಾಗರಜೀವಿಗಳ ಮಾಹಿತಿ ಕೇಂದ್ರ ಸೇರಿ ಹಲವು ಸೌಲಭ್ಯಗಳಿವೆ. ಅವುಗಳು ಇನ್ನಷ್ಟು ಜನರಿಗೆ ಪರಿಚಯಿಸುವ ಕೆಲಸವಾಗಬೇಕಿದೆ’ ಎಂದು ಇ.ಎಸ್.ಸುಧೀಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.