ADVERTISEMENT

ಹಿರಿಯಕ್ಕನನ್ನು ಕಳೆದುಕೊಂಡ ನೋವು

ಸುಷ್ಮಾ ಸ್ವರಾಜ್ ಜೊತೆಗಿನ ಒಡನಾಟ ನೆನಪಿಸಿಕೊಂಡ ಕಾರ್ಯಕರ್ತೆಯರು

ಸಂಧ್ಯಾ ಹೆಗಡೆ
Published 7 ಆಗಸ್ಟ್ 2019, 19:45 IST
Last Updated 7 ಆಗಸ್ಟ್ 2019, 19:45 IST
2013ರಲ್ಲಿ ಸುಷ್ಮಾ ಸ್ವರಾಜ್ ಶಿರಸಿಗೆ ಭೇಟಿ ನೀಡಿದಾಗ ಉತ್ತರ ಕನ್ನಡ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ತೆಗೆಸಿಕೊಂಡಿದ್ದ ಚಿತ್ರ
2013ರಲ್ಲಿ ಸುಷ್ಮಾ ಸ್ವರಾಜ್ ಶಿರಸಿಗೆ ಭೇಟಿ ನೀಡಿದಾಗ ಉತ್ತರ ಕನ್ನಡ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ತೆಗೆಸಿಕೊಂಡಿದ್ದ ಚಿತ್ರ   

ಶಿರಸಿ: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ನಿಧನದ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಿರಿಯಕ್ಕನನ್ನು ಕಳೆದುಕೊಂಡಷ್ಟು ನೊಂದುಕೊಂಡರು.

ಸುಷ್ಮಾ ಅವರ ಜೊತೆ ಹತ್ತಿರದಿಂದ ಒಡನಾಡಿದವರು ಹಲವರು. ಅವರು 2–3 ಬಾರಿ ಶಿರಸಿಗೆ ಭೇಟಿ ನೀಡಿದ್ದರು. ಆದರೆ, ಅವರ ಭೇಟಿಯೆಲ್ಲವೂ ಚುನಾವಣಾ ಪ್ರಚಾರಕ್ಕೇ ಆಗಿತ್ತು. ಅವರು ಪ್ರಚಾರಕ್ಕೆ ಬಂದ ಚುನಾವಣೆಗಳಲ್ಲೆಲ್ಲ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಿದ್ದು, ಕಾರ್ಯಕರ್ತರಲ್ಲಿ ಅವರ ಬಗ್ಗೆ ಇನ್ನಷ್ಟು ಅಭಿಮಾನ ಮೂಡಿಸಿತ್ತು.

ಆಗ ಕಾರ್ಯಕರ್ತರ ಜೊತೆ ಅವರು ಸರಳವಾಗಿ ಮಾತನಾಡಿದ ನೆನಪನ್ನು ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ನೆನಪಿಸಿಕೊಂಡರು.

ADVERTISEMENT

‘2013ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಏಪ್ರಿಲ್ 27ರಂದು ಅವರು ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚಿಸಲು ಬಂದಿದ್ದರು. ‘ಬೇಟಾ ಬೇಟಾ’ ಎನ್ನುತ್ತಲೇ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ಅಮ್ಮನ ಪ್ರೀತಿಯಿತ್ತು. ನಾನು ‘ಮೇಡಂ ನಿಮ್ಮ ಹಾಗೆ ಮಾತನಾಡಬೇಕೆಂಬ ಆಸೆಯಿದೆ’ ಎಂದೆ. ಬಿಜೆಪಿ ಎಲ್ಲರಿಗೂ ಮಾತನಾಡಲು ಅವಕಾಶ ಕೊಡುತ್ತದೆ. ನೀವು ಕೂಡ ನನ್ನ ಹಾಗೆ ಸವಾಲನ್ನು ಎದುರಿಸಿ ಗೆಲ್ಲಬೇಕು’ ಎಂದು ಹಿತವಚನ ಹೇಳಿದ್ದರು ಎಂದರು ಉಷಾ.

‘ವಿಷಯ ಮತ್ತು ಧೈರ್ಯ ಎರಡು ಇದ್ದರೆ ಸಾಕು, ನೀವು ಸುಷ್ಮಾ ಆಗ್ತೀರಿ. ಹೆಚ್ಚು ಹೆಚ್ಚು ಜನರ ಜೊತೆ ಬೆರೆಯಿರಿ. ಆಗ ತಾನಾಗಿಯೇ ನಾಯಕಿ ಆಗ್ತೀರಿ. ಉತ್ತರ ಕನ್ನಡದ ಮಹಿಳೆಯರು ಜೋರು ಅಂತ ಎಲ್ಲರೂ ಹೇಳಬೇಕು. ಹಾಗೆ ನೀವೆಲ್ಲ ಸಿದ್ಧರಾರಬೇಕು ಎಂದು ಹುರಿದುಂಬಿಸಿದ್ದರು’ ಎಂಬುದನ್ನು ಅವರು ಸ್ಮರಿಸಿಕೊಂಡರು.

‘ಸುಷ್ಮಕ್ಕ ಶಿರಸಿಗೆ ಬಂದ ವೇಳೆ ನಾನು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿದ್ದೆ. ಹೀಗಾಗಿ, ಅವರನ್ನು ಬರಮಾಡಿಕೊಳ್ಳುವ ಅವಕಾಶವೂ ಸಿಕ್ಕಿತ್ತು. ವಿನಯತೆ, ಭಾವನಾತ್ಮಕವಾದ ಮಾತು ಅವರ ಎತ್ತರದ ವ್ಯಕ್ತಿತ್ವನ್ನು ಪರಿಚಯಿಸಿತ್ತು. ರಾಜಕೀಯ ಮಾತ್ರವಲ್ಲದೇ ಅನೇಕ ವಿಷಯಗಳ ಬಗ್ಗೆ ಸ್ಫುಟವಾಗಿ ಮಾತನಾಡುತ್ತಿದ್ದರು. ಅಲ್ಲದೇ ನಮ್ಮ ಬಳಿ, ರಾಜಕೀಯಕ್ಕೆ ಸುಮ್ಮನೆ ಬಂದರೆ ಆಗದು, ಸಾಕಷ್ಟು ತಿಳಿದುಕೊಳ್ಳಬೇಕು ಎಂದಿದ್ದರು’ ಎಂದು ನಗರಸಭೆ ಸದಸ್ಯೆ ವೀಣಾ ಶೆಟ್ಟಿ ಅವರ ಒಡನಾಟದ ಕ್ಷಣಗಳನ್ನು ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.