ADVERTISEMENT

ಉತ್ತರ ಕನ್ನಡ | ಪರೇಶ್ ಮೇಸ್ತಾ ಸಾವಿನ ಪ್ರಕರಣ: ಯುವಕರ ಮೇಲಿನ ಪ್ರಕರಣ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 14:07 IST
Last Updated 20 ಏಪ್ರಿಲ್ 2020, 14:07 IST

ಶಿರಸಿ: ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಪ್ರತಿಭಟನೆ ನಡೆಸಿದವ ಮೇಲೆ ಪೊಲೀಸರು ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಆಪ್ತ ಸಹಾಯಕ ಸುರೇಶ ಶೆಟ್ಟಿ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಹೊನ್ನಾವರ ತಾಲ್ಲೂಕಿನಲ್ಲಿ 2017, ಡಿಸೆಂಬರ್ 6ರಂದು ನಡೆದ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಆಗಿನ ಕಾಂಗ್ರೆಸ್ ಸರ್ಕಾರವು, ಮರಣೋತ್ತರ ಪರೀಕ್ಷಾ ವರದಿ ಬರುವ ಪೂರ್ವದಲ್ಲೇ ಇದೊಂದು ಸಹಜ ಸಾವೆಂದು ಹೇಳುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿತ್ತು. ಯುವಕನ ಹತ್ಯೆಯ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಕಾರವಾರ, ಅಂಕೋಲಾ, ಕುಮಟಾ. ಹೊನ್ನಾವರ, ಶಿರಸಿ ಹಾಗೂ ರಾಮನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ, ಅಮಾಯಕ ಯುವಕರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆದಿದೆ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕರಣ ಹಿಂಪಡೆಯಲು ವಿಶೇಷ ಮುತುವರ್ಜಿ ವಹಿಸಿದ್ದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರಿಗೆ ಅನಂತಕುಮಾರ ಹೆಗಡೆ ಧನ್ಯವಾದ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.