ADVERTISEMENT

ಕಾಂಗ್ರೆಸ್‍ನಿಂದ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಇಲ್ಲ: ಸುನೀಲ ಹೆಗಡೆ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 14:25 IST
Last Updated 19 ಮೇ 2024, 14:25 IST
ಸುನೀಲ ಹೆಗಡೆ
ಸುನೀಲ ಹೆಗಡೆ   

ಹಳಿಯಾಳ: ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆ ನೀಡಿ ಪ್ರಚಾರ ಪಡೆಯುತ್ತಿದೆಯೇ ವಿನಾ ಮಹಿಳೆಯರ ಜೀವನಕ್ಕೆ ಭದ್ರತೆ ನೀಡುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಸುನೀಲ ಹೆಗಡೆ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯ ಅಂಜಲಿ ಕೊಲೆ ಬೆದರಿಕೆ ಕುರಿತು ದೂರು ನೀಡಿದ್ದರೂ ನಿರ್ಲಕ್ಷ್ಯ ತೋರುವ ಮೂಲಕ ಪೊಲೀಸರು ಪರೋಕ್ಷವಾಗಿ ಕೊಲೆಗೆ ಕಾರಣರಾಗಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ಆರಂಭವಾಗಿದೆ. ನೇಹಾ ಹಿರೇಮಠ, ಅಂಜಲಿ ಸೇರಿದಂತೆ ಹಲವು ಘಟನೆಗಳು ಇಂತಹ ಚರ್ಚೆಗೆ ಎಡೆಮಾಡಿಕೊಟ್ಟಿವೆ’ ಎಂದರು.

ADVERTISEMENT

‘ಕೂಡಲೆ ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ಸರ್ಕಾರ ವಜಾಗೊಳಿಸಬೇಕು. ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರುವ ಕೆಲಸ ಆಗದಿದ್ದರೆ ಮಹಿಳೆಯರು ಸುರಕ್ಷಿತವಾಗಿ ಓಡಾಟ ನಡೆಸುವುದು ಕಷ್ಟವಾಗಲಿದೆ’ ಎಂದರು.

‘ದೇಶದ ಅಭಿವೃದ್ಧಿ ಕಾರ್ಯ ಶ್ಲಾಘಿಸಿದ ನಟಿ ರಶ್ಮಿಕಾ ಮಂದಣ್ಣ ಅವರ ಹೇಳಿಕೆಯನ್ನು ಟೀಕಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ ತಮ್ಮ ಕಾರ್ಯವ್ಯಾಪ್ತಿ ಬಗ್ಗೆ ಅರಿಯಲಿ. ರಾಜ್ಯ ಸರ್ಕಾರ ಒಂದು ವರ್ಷದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಸವಾಲು ಎಸೆದರು.

ಪುರಸಭೆ ಸದಸ್ಯ ಉದಯ ಹೂಲಿ, ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಸಂಗೀತಾ ಜಾವಳೇಕರ, ಮಾಲಾ ಹುಂಡೆಕರ, ರತ್ನಾಮಾಲಾ ಮೂಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.