
ಅಂಕೋಲಾ: ತಾಲ್ಲೂಕಿನ ಬೇಲೆಕೇರಿ ಮೀನುಗಾರಿಕಾ ಬಂದರಿನಲ್ಲಿ ಅಲೆ ತಡೆಗೋಡೆ ಮತ್ತು ಡ್ರೆಜಿಂಗ್ ಇಲ್ಲದ ಕಾರಣ ಎರಡು ದೋಣಿಗಳು ಮುಳುಗಿ ಲಕ್ಷಾಂತರ ರೂಪಾಯಿ ಹಾನಿಯಾಗಿರುವುದಕ್ಕೆ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿ ಬೆಲೇಕೇರಿ ಫಿಶರೀಸ್ ಕೋ - ಆಪರೇಟಿವ್ ಸೊಸೈಟಿ ವತಿಯಿಂದ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರಿಗೆ ಅಂಕೋಲಾದಲ್ಲಿ ಮನವಿ ಸಲ್ಲಿಸಲಾಯಿತು.
ಬೇಲೆಕೇರಿ ಬಂದರಿನಲ್ಲಿ ಕಳೆದ ವಾರ ಬೆಳಗಿನ ಜಾವ ಸಮುದ್ರದಲ್ಲಿ ರಭಸವಾಗಿ ಬಂದ ಅಲೆಗಳ ಅಬ್ಬರಕ್ಕೆ ಸಿಲುಕಿ ಹಾಗೂ ಮೀನುಗಾರಿಕೆ ಮುಗಿಸಿಕೊಂಡು ಬಂದರಿಗೆ ಬರುವ ಸಂದರ್ಭದಲ್ಲಿ ಬಂದರಿನ ಮಧ್ಯದಲ್ಲಿ ಸಿಲುಕಿ ಎರಡು ಬೋಟ್‌ಗಳು ಮುಳುಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಈ ಎರಡೂ ಬೋಟ್ ಮಾಲೀಕರು ತುಂಬಾ ತೊಂದರೆಯಲ್ಲಿದ್ದು ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
‘ಬಂದರಿನಲ್ಲಿ ಅಲೆ ತಡೆಗೋಡೆ ಇಲ್ಲದಿರುವುದು ಹಾಗೂ ಹೂಳು ತುಂಬಿ ಡ್ರೆಜಿಂಗ್ ಆಗದೇ ಇರುವುದರಿಂದ ಕಳೆದ ಹಲವು ವರ್ಷಗಳಿಂದ ಈ ರೀತಿಯ ಅವಘಡಗಳು ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಅನುಭವಿಸುತ್ತ ಬಂದಿದ್ದೇವೆ. ಇದರಿಂದ ಬೇಲೆಕೇರಿ ಬಂದರಿನಲ್ಲಿ ಮೀನುಗಾರಿಕೆ ನಡೆಸುವುದೇ ಕಷ್ಟಕರವಾಗಿದೆ. ಇದಕ್ಕೆ ಸಂಬಂಧಿಸಿ ತಮಗೂ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆರು ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದೀರಿ. ಈಗ ಡ್ರೆಜಿಂಗ್ ಕಾಮಗಾರಿ ಮಂಜೂರಿಯಾಗಿದೆ ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಅಲೆ ತಡೆಗೋಡೆ ಕಾಮಗಾರಿಗೆ ಅನುಮೋದನೆ ದೊರಕಿಸಿಕೊಟ್ಟು, ಆದಷ್ಟು ಬೇಗ ಡ್ರೆಜಿಂಗ್ ಕಾಮಗಾರಿ ಆರಂಭಿಸಬೇಕು’ ಎಂದು ಮನವಿ ಮಾಡಿದರು.
ಬೇಲೆಕೇರಿ ಫಿಶರೀಸ್ ಕೋ - ಆಪರೇಟಿವ್ ಸೊಸೈಟಿ ಅಧ್ಯಕ್ಷ ಪ್ರಮೋದ್ ಬಾನಾವಳಿಕರ, ಉಪಾಧ್ಯಕ್ಷ ಮಂಜುನಾಥ ಟಾಕೇಕರ್, ಕಾರ್ಯದರ್ಶಿ ಅಶೋಕ್ ಕುಡ್ತಳಕರ, ಸದಸ್ಯರಾದ ನಾಗೇಂದ್ರ ತಾಂಡೇಲ್, ಜೈರಾಮ ಬಾನಾವಳಿಕರ, ಪುನೀತ್ ಬಾನಾವಳಿಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.