ADVERTISEMENT

ತಾಯಿ, ತಮ್ಮನನ್ನು ಕಡಿದು ಕೊಂದ ತಂದೆ: ಅಪ್ಪನ ಕ್ರೌರ್ಯಕ್ಕೆ ಬೆಚ್ಚಿದ ಬಾಲಕ

ಮಳೆಯಿಂದ ಶಾಲೆಗೆ ರಜೆಯೆಂದು ಹಾಸ್ಟೆಲ್‌ನಿಂದ ಮನೆಗೆ ಹೋಗಿದ್ದ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 16:08 IST
Last Updated 8 ಜುಲೈ 2022, 16:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕುಮಟಾ: ಬಂಗಣೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದ ಅಮ್ಮ, ಮಗನ ಕೊಲೆ ಮತ್ತು ಅಪ್ಪನ ಆತ್ಮಹತ್ಯೆ ಪ್ರಕರಣವು ಇಡೀ ಗ್ರಾಮವನ್ನು ಬೆಚ್ಚಿ ಬೀಳಿಸಿದೆ. ಕೃತ್ಯ ನಡೆದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ.

ಮನೆಯಲ್ಲಿ ತಾಯಿ ಮತ್ತು ತಮ್ಮನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ತಂದೆ, 15 ವರ್ಷದ ಹಿರಿ ಮಗನನ್ನೂ ಕೊಲ್ಲಲು ಅಟ್ಟಿಸಿಕೊಂಡು ಬಂದ. ಆತ ತಪ್ಪಿಸಿಕೊಂಡು ಓಡಿ ಪ್ರಾಣ ಉಳಿಸಿಕೊಂಡ. ನಂತರ ಅಪ್ಪ ರಾಮ ಮರಾಠಿ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡ. ಅಪ್ಪನ ಕ್ರೌರ್ಯದಿಂದ ಬೆಚ್ಚಿಬಿದ್ದವ ಬಾಲಕನಿಗೆ ಈಗ ಅಜ್ಜಿ ಆಶ್ರಯ ನೀಡಿದ್ದಾರೆ. ದುಃಖಿಸುತ್ತ ಅಜ್ಜಿಯ ಮಡಿಲಲ್ಲಿ ತಲೆಯಿಟ್ಟು ಕಣ್ಣುಮುಚ್ಚಿ ಮಲಗಿದರೂ ಆಗಾಗ ದುಃಸ್ವಪ್ನ ಕಂಡಂತೆ ಬೆಚ್ಚಿ ಬೀಳುತ್ತಿದ್ದಾನೆ.

ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಟ್ಟ ಕಾಡಿನ ಅಘನಾಶಿನಿ ನದಿ ದಡದಲ್ಲಿರುವ ಬಂಗಣೆ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದೆ. ಆದರೆ, ಪ್ರೌಢಶಾಲೆಗಾಗಿ ವಿದ್ಯಾರ್ಥಿಗಳು ಕುಮಟಾ– ಸಿದ್ದಾಪುರ ರಸ್ತೆಯಲ್ಲಿರುವ ಸಂತೆಗುಳಿಗೆ ಬರಬೇಕು.

ADVERTISEMENT

‘ಬಂಗಣೆ, ಮೊರಸೆ ಗ್ರಾಮದ ಹೆಚ್ಚಿನ ವಿದ್ಯಾರ್ಥಿಗಳು ಕುಮಟಾದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಇದ್ದುಕೊಂಡು ಪ್ರೌಢಶಾಲೆ, ಕಾಲೇಜಿಗೆ ಹೋಗುತ್ತಾರೆ. ಈತನೂ ಅಲ್ಲಿದ್ದುಕೊಂಡೇ ನೆಲ್ಲಿಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾನೆ. ಭಾರಿ ಮಳೆಯ ಕಾರಣಎರಡು ದಿನಗಳ ಹಿಂದೆ ಶಾಲೆಗೆ ರಜೆ ನೀಡಿದ್ದರಿಂದ ತನ್ನ ಗೆಳೆಯರೊಂದಿಗೆ ಊರಿಗೆ ಹೋಗಿದ್ದ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಣೇಶ ಪಟಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುವಾರ ತಡರಾತ್ರಿ ಸುಮಾರು ಎರಡು ಗಂಟೆಗೆ ಗಾಬರಿಯಿಂದ ದೊಡ್ಡಪ್ಪ ದೊಡ್ಡಪ್ಪ ಎಂದು ಕಿರಿಚುತ್ತ ಓಡಿ ಬಂದ. ಅಪ್ಪ ಅಮ್ಮ ಹಾಗೂ ತಮ್ಮನನ್ನು ಕಡಿದು ಹಾಕಿದ ಎಂದ. ಘಟನೆ ನಡೆದ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ನಮ್ಮ ಮನೆಯಿದೆ. ಗಾಢ ನಿದ್ದೆಯಲ್ಲಿದ್ದ ನಾನು ಗಡಬಡಿಸಿ ಎದ್ದು ಹೊರಗೆ ಬಂದೆ. ಬಾಲಕನ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ, ಒಂದೇ ಸಮನೆ ಅಳುತ್ತಿದ್ದ. ಅವನನ್ನು ಕರೆದುಕೊಂಡು ವಾಪಸ್ ಅವನ ಮನೆಯತ್ತ ಹೋಗುವಾಗ ದಾರಿಯಲ್ಲಿ ಅವನ ತಮ್ಮ ಲಕ್ಷ್ಮಣ ರಕ್ತದ ಮಡುವಿನಲ್ಲಿ ಬಿದ್ದಿದ್ದ’ ಎಂದು ದೂರದ ಸಂಬಂಧಿಯೂ ಆಗಿರುವ ಗ್ರಾಮ ಪಂಚಾಯಿತಿ ಸದಸ್ಯ ಈಶ್ವರ ಮರಾಠಿ ಗದ್ಗದಿತರಾದರು.

‘ಕೆಲವು ಸಲ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದ ರಾಮ ಮರಾಠಿ, ಕತ್ತಲಲ್ಲಿ ಅಡಗಿ ಕುಳಿತು ಎಲ್ಲಿ ನಮ್ಮ ಮೇಲೂ ಹಲ್ಲೆ ನಡೆಸುತ್ತಾನೋ ಎಂದು ಹೆದರಿ ಮುಂದೆ ಹೋಗಲಿಲ್ಲ. ಪೊಲೀಸರಿಗೆ ತಿಳಿಸಲು ಮೊಬೈಲ್ ಸಿಗ್ನಲ್ ಸಿಗುವ ಕಡೆಗೆ ಹೋದೆವು. ಪೊಲೀಸರು ಬಂದ ಮೇಲೆ ಎಲ್ಲರೂ ಸೇರಿ ಮನೆಯತ್ತ ಹೋದರೆ, ಜಗುಲಿಯ ಮೇಲೆ ರಾಮ ಹೆಂಡತಿ ತಾಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆತ ಮನೆಯ ಮಾಡಿನ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ’ ಎಂದು ತಿಳಿಸಿದರು.

‘ಕೊಲೆಯಾದ ವಿದ್ಯಾರ್ಥಿ ಲಕ್ಷ್ಮಣ ಮರಾಠಿ, ಬಂಗಣೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.