
ನಾಲ್ಕು ದಶಕಗಳಿಂದ ನಿರಂತರವಾಗಿ ಹಲವು ಯೋಜನೆಗಳ ಹೇರಿಕೆಗೆ ಒಳಗಾಗಿರುವ ಉತ್ತರ ಕನ್ನಡ ಜಿಲ್ಲೆಯ ಜನರು ಈಗ ಉದ್ದೇಶಿತ ಬೇಡ್ತಿ–ವರದಾ ಮತ್ತು ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳು ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಪ್ರಬಲ ಧ್ವನಿ ಎತ್ತಿದ್ದಾರೆ. ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಯೋಜನೆ ವ್ಯಾಪ್ತಿ ಪ್ರದೇಶಗಳಲ್ಲಿ ಸರಣಿ ಪ್ರತಿಭಟನೆಗಳು ನಡೆದಿವೆ. ಈಗ ಮತ್ತೊಂದು ಸುತ್ತಿನ ತೀವ್ರ ಹೋರಾಟಕ್ಕೆ ಜನರು ಸಿದ್ಧತೆ ನಡೆಸುತ್ತಿದ್ದಾರೆ
ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜೊತೆಗೆ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆ ಯನ್ನು ಒಳಗೊಂಡಿರುವ ಬಹುರೂಪದ ಭೌಗೋಳಿಕ ತಾಣ ಉತ್ತರ ಕನ್ನಡ. ಇಲ್ಲಿನ ದಟ್ಟ ಕಾಡಿನ ನಡುವೆ ಅಣುವಿದ್ಯುತ್ ಸ್ಥಾವರ ನಿರ್ಮಾಣಗೊಂಡಿತು. ಕಡಲತೀರದಲ್ಲಿ ನೌಕಾನೆಲೆ ಮೈಚಾಚಿಕೊಂಡಿತು. ಕಾಳಿ ನದಿಯ ಸ್ವಚ್ಛಂದ ಹರಿವಿಗೆ ಐದು ಅಣೆಕಟ್ಟೆಗಳು ತಡೆಯೊಡ್ಡಿದವು. ಸಾಲು ಸಾಲು ಯೋಜನೆಗಳ ಹೇರಿಕೆಯಿಂದ ಉತ್ತರ ಕನ್ನಡ ಜಿಲ್ಲೆ ನಲುಗಿದ್ದರೂ, ಈಗ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಪೂರ್ವಾಭಿಮುಖಕ್ಕೆ ತಿರುಗಿಸುವ ಯೋಜನೆಗಳ ಜಾರಿಗೆ ಸರ್ಕಾರ ಮುಂದಡಿ ಇಟ್ಟಿದೆ. ಜೊತೆಗೆ ಶರಾವತಿ ಕಣಿವೆಗೆ ಧಕ್ಕೆ ತರಲಿದೆ ಎಂಬ ಆರೋಪ ಹೊತ್ತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯ ತರಾತುರಿಯೂ ಕಾಣುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಉಗಮಗೊಂಡು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಬೇಡ್ತಿ ನದಿಯನ್ನು ಹಾವೇರಿ ಮತ್ತು ಗದಗ ಜಿಲ್ಲೆಯ ವ್ಯಾಪ್ತಿಗೆ ನೀರು ಪೂರೈಕೆಗೆ ವರದಾ ನದಿಗೆ ಜೋಡಿಸಲು ‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆ’ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಯೋಜನೆಯ ಪೂರ್ವ ಕಾರ್ಯಸಾಧ್ಯತಾ ವರದಿ ಪುರಸ್ಕರಿಸಿ, ಯೋಜನೆ ಜಾರಿ ಸಲುವಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.
ಉತ್ತರ ಕನ್ನಡದಲ್ಲೇ ಹುಟ್ಟಿ, ಇಲ್ಲಿಯೇ ಹರಿದು ಅರಬ್ಬಿ ಸಮುದ್ರ ಸೇರುವ ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ಇನ್ನೊಂದು ಯೋಜನೆಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (ಎನ್‌ಡಬ್ಲ್ಯುಡಿಎ) ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿದೆ. ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ.
ಪಶ್ಚಿಮ ಘಟ್ಟದ ಕಣಿವೆಗಳ ಮೂಲಕ ಹರಿಯುವ ನದಿಗಳನ್ನು ಪೂರ್ವಾಭಿಮುಖವಾಗಿ ತಿರುಗಿಸುವ ನದಿ ಜೋಡಣೆ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡು ದಶಕಗಳಿಂದಲೂ ಪ್ರಯತ್ನ ನಡೆಸುತ್ತಿವೆ. ಜನರ ಪ್ರಬಲ ವಿರೋಧದ ಕಾರಣದಿಂದ ಇಲ್ಲಿಯವರೆಗೆ ಯೋಜನೆ ಜಾರಿಗೆ ತರುವುದು ಸಾಧ್ಯವಾಗಿಲ್ಲ. 2004ರಲ್ಲಿಯೇ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜಾರಿಗೆ ಯೋಜಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲೆ ಬೃಹತ್ ಯೋಜನೆಗಳ ಭಾರದಿಂದ ನಲುಗಿದೆ. ಪರಿಸರ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೇ ಹೊಸ ಯೋಜನೆ ಪ್ರಸ್ತಾಪ ಬೇಡವೆಂದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಎದುರು ವಾದಿಸಲಾಗಿತ್ತು. ಪರಿಣಾಮವಾಗಿ ಯೋಜನೆ ಮುಂದುವರಿದಿರಲಿಲ್ಲ.
ಅಘನಾಶಿನಿ ನದಿಗೆ ಸಿದ್ದಾಪುರ ತಾಲ್ಲೂಕಿನ ಬಾಳೆಕೊಪ್ಪ ಸಮೀಪ ಅಣೆಕಟ್ಟು ನಿರ್ಮಿಸಿ, ಅಲ್ಲಿಂದ ನೀರನ್ನು ಚಿತ್ರದುರ್ಗ ಜಿಲ್ಲೆಯತ್ತ ತಿರುಗಿಸುವ ಯೋಜನೆ ಜಾರಿಗೆ 90ರ ದಶಕದಲ್ಲಿ ಪ್ರಯತ್ನ ನಡೆದಿತ್ತು. ಆಗಲೂ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನಡೆಸಿದ ನಿರಂತರ ಹೋರಾಟದ ಫಲವಾಗಿ ಯೋಜನೆ ಪ್ರಗತಿ ಕಂಡಿರಲಿಲ್ಲ.
‘ಉತ್ತರ ಕನ್ನಡದ ಯಲ್ಲಾಪುರ, ಶಿರಸಿ, ಅಂಕೋಲಾ ತಾಲ್ಲೂಕುಗಳ 1.5 ಲಕ್ಷ ರೈತರು ಕೃಷಿ ಚಟುವಟಿಕೆಗೆ ಬೇಡ್ತಿ ನದಿ ನೀರನ್ನು ಅವಲಂಬಿಸಿದ್ದಾರೆ. ಶಿರಸಿ ನಗರ, ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯೂ ಬೇಡ್ತಿ ನದಿಯನ್ನು ಅವಲಂಬಿಸಿದೆ. ಯೋಜನೆಯ ಭಾಗವಾಗಿ ಬೇಡ್ತಿ ಕಣಿವೆಯ ಹಳ್ಳಗಳಿಗೆ 15 ಸ್ಥಳಗಳಲ್ಲಿ ಕಿರು ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಬೇಡ್ತಿಯ ಮುಂದುವರಿದ ಭಾಗವಾಗಿರುವ ಗಂಗಾವಳಿ ನದಿಯ ನೀರನ್ನು ಕಾರವಾರ ನಗರ, ಅಂಕೋಲಾ ಪಟ್ಟಣ, ಕದಂಬ ನೌಕಾನೆಲೆ, ನೂರಾರು ಹಳ್ಳಿಗಳಿಗೆ ಕುಡಿಯುವ ಉದ್ದೇಶಕ್ಕೆ ಪೂರೈಸಲಾಗುತ್ತಿದೆ. ಬೇಸಿಗೆಯ ಆರಂಭದಲ್ಲೇ ಹರಿವು ಕಡಿಮೆಯಾಗುವ ಈ ನದಿಯನ್ನು ತಿರುಗಿಸಿದರೆ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಲಿದೆ’ ಎಂಬುದು ಯೋಜನೆಯನ್ನು ವಿರೋಧಿಸುತ್ತಿರುವವರ ವಾದ.
‘ಯೋಜನೆ ಅನುಷ್ಠಾನಗೊಂಡರೆ ಬೆಟ್ಟ-ಅರಣ್ಯ, ಗುಡ್ಡ, ಕಣಿವೆ ತುಂಡು ತುಂಡಾಗುತ್ತವೆ. ಭೂಕುಸಿತ ವ್ಯಾಪಕವಾಗುತ್ತದೆ. ವನ್ಯಜೀವಿಗಳು ಅತಂತ್ರವಾಗಲಿವೆ. ವನ್ಯಜೀವಿಗಳ ಹಾವಳಿ ಮಲೆನಾಡಿಗರಿಗೆ ಇನ್ನೂ ಗಂಭೀರ ಸಂಕಷ್ಟ ತಂದೊಡ್ಡಲಿದೆ. 12 ವರ್ಷಗಳ ಹಿಂದೆಯೇ ವನ್ಯಜೀವಿ ಮಂಡಳಿ ಶಾಲ್ಮಲಾ–ಬೇಡ್ತಿ ನದಿ ಕಣಿವೆ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದೆ. ಯೋಜನೆ ಜಾರಿಯಿಂದ ಸಂರಕ್ಷಿತ ಪ್ರದೇಶ ಮತ್ತು ಅದರಲ್ಲಿನ ಜೀವವೈವಿಧ್ಯಗಳು ನಾಶವಾಗಲಿವೆ’ ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಅಧ್ಯಯನ ನಡೆಸಿ, ಸಿದ್ಧಪಡಿಸಿದ ವಿಶ್ಲೇಷಣೆ ವರದಿ ಹೇಳುತ್ತಿದೆ.
ಶರಾವತಿ ಅಭಯಾರಣ್ಯದಲ್ಲಿ ಕರ್ನಾಟಕ ವಿದ್ಯುತ್ ನಿಗಮವು 2,000 ಮೆಗಾ ವ್ಯಾಟ್ ಭೂಗತ ಜಲವಿದ್ಯುತ್ ಯೋಜನೆ ಸ್ಥಾಪಿಸಲು ಮುಂದಾಗಿದೆ. ಜಿಲ್ಲಾಡಳಿತವು ಇದಕ್ಕೆ ಸಾರ್ವಜನಿಕ ಅಹವಾಲು ಸಭೆಯನ್ನು ಇತ್ತೀಚೆಗೆ ನಡೆಸಿದಾಗ, ಹತ್ತಾರು ಸಾವಿರ ಸ್ಥಳೀಯ ಜನರು ಬಂದು ಅಧಿಕೃತವಾಗಿ ಯೋಜನೆಯನ್ನು ವಿರೋಧಿಸಿ ಮನವಿ ನೀಡಿದ್ದಾರೆ.
‘ಈ ಯೋಜನೆ ಪ್ರಸ್ತಾಪವಾಗಿರುವುದು ಪಶ್ಚಿಮಘಟ್ಟದ ದಟ್ಟ ಮಳೆಕಾಡಿರುವ ಸೂಕ್ಷ್ಮ ಪರ್ವತಶ್ರೇಣಿ ಪ್ರದೇಶದಲ್ಲಿ. ಮೇಲುಗಡೆ ಅನತಿ ದೂರದಲ್ಲಿ ವಿಶ್ವಪ್ರಸಿದ್ದ ಜೋಗ ಜಲಪಾತ ಹಾಗೂ ಲಿಂಗನಮಕ್ಕಿ ಅಣೆಕಟ್ಟೆಯಿದೆ. ಕೆಳಗಡೆ ಸಮೀಪದಲ್ಲಿ ಗೇರುಸೊಪ್ಪೆ ಅಣೆಕಟ್ಟೆಯಿದೆ. ಇಂಥ ಸೂಕ್ಷ್ಮಪ್ರದೇಶದಲ್ಲಿ ಈ ಯೋಜನೆಯನ್ನು ಕಾರ್ಯಗತಮಾಡಿದರೆ ಭೂಕುಸಿತ ಘಟಿಸುವ ಅಪಾಯವಿದೆ. ಕಾಡಿನ ವನ್ಯಜೀವಿ ಆವಾಸಸ್ಥಾನ ನಾಶವಾಗಿ, ಅಪರೂಪದ ಕಾಡುಪ್ರಾಣಿಗಳು ಸುತ್ತಲಿನ ಹೊಲ-ತೋಟ ಜನವಸತಿಗಳಿಗೆ ನುಗ್ಗತೊಡಗಿ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತದೆ. ಅಭಯಾರಣ್ಯ ನಾಶವಾಗಲಿದೆ. ನದಿಯ ಕೆಳಹರಿವಿನಲ್ಲಿ ನೀರು ಇನ್ನಷ್ಟು ಕಡಿಮೆಯಾಗಿ, ಗೇರುಸೊಪ್ಪ-ಹೊನ್ನಾವರ ವ್ಯಾಪ್ತಿಯ ನದಿಯಂಚಿನ ನೂರಾರು ಹಳ್ಳಿಗಳ ಹತ್ತಾರು ಸಾವಿರ ಜನರ ನೀರಿನ ಬವಣೆ ಇನ್ನಷ್ಟು ಉಲ್ಬಣಿಸುತ್ತದೆ’ ಎಂದೂ ಸಮಿತಿಯ ಅಧ್ಯಯನ ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ರಾಜ್ಯ ಜಲಸಂಪನ್ಮೂಲ ಇಲಾಖೆ ಜಂಟಿಯಾಗಿ ಅನುಷ್ಠಾನ
ಅಂದಾಜು ₹23,000 ಕೋಟಿ ವೆಚ್ಚ
199 ಕಿ.ಮೀ ಉದ್ದದ ಪೈಪ್‌ಲೈನ್
ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಅಂದಾಜು 600 ಎಕರೆ ಅರಣ್ಯ ಭೂಮಿ ಬಳಕೆ
ಸಿದ್ದಾಪುರ ತಾಲ್ಲೂಕಿನ ಬಾಳೆಕೊಪ್ಪ ಬಳಿ ಅಣೆಕಟ್ಟೆ ನಿರ್ಮಿಸಿ, ನೀರು ಪಂಪ್ ಮಾಡಿ ಗೋಳಿಮಕ್ಕಿ ಹಾರ್ಸಿಕಟ್ಟಾ, ಸಿದ್ದಾಪುರ, ಸಾಗರ, ಶಿವಮೊಗ್ಗ, ತರೀಕೆರೆ, ಅಜ್ಜಂಪುರ ಮಾರ್ಗವಾಗಿ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ
1.20 ಲಕ್ಷ ಮರಗಳು ಬಲಿ ಸಾಧ್ಯತೆ
ಶರಾವತಿ ಪಂಪ್ಡ್ ಸ್ಟೋರೇಜ್
ಕರ್ನಾಟಕ ವಿದ್ಯತ್ ನಿಗಮ ನಿಯಮಿತ (ಕೆಪಿಸಿಎಲ್) ಜಾರಿಗೊಳಿಸುತ್ತಿರುವ ಯೋಜನೆ
ಅಂದಾಜು ₹10,500 ಕೋಟಿ ವೆಚ್ಚ
54.55 ಹೆಕ್ಟೇರ್ ಯೋಜನೆಗೆ ಬಳಕೆಯಾಗಲಿರುವ ಅರಣ್ಯ ಪ್ರದೇಶ
16,041 ಹನನವಾಗಲಿರುವ ಮರಗಳು
7 ಕಿ.ಮೀ ಉದ್ದದ ಸುರಂಗ ಮಾರ್ಗ
‘ಬಯಲು ಸೀಮೆಯ ನೀರಿನ ಕೊರತೆ ನೀಗಿಸಲು ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನದಿಗಳನ್ನು ಪೂರ್ವಾಭಿಮುಖವಾಗಿ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ. ‘ಸಮುದ್ರಕ್ಕೆ ನೀರು ಹರಿದು ಪೋಲಾಗುತ್ತಿದೆ. ಅದೇ ನೀರನ್ನು ಬಯಲುಸೀಮೆಗೆ ಹರಿಸಿದರೆ ಅನುಕೂಲವಾಗುತ್ತದೆ’ ಎಂಬ ಕಾರಣ ನೀಡಿ ಯೋಜನೆ ಜಾರಿಗೆ ಯತ್ನಿಸಲಾಗುತ್ತಿದೆ. ಸಮುದ್ರಕ್ಕೆ ನೀರು ಸೇರುವುದು ಪೋಲು ಎಂಬ ಧೋರಣೆಯೇ ಅಪಾಯಕಾರಿ ಸಂಗತಿ. ಸಮುದ್ರಕ್ಕೆ ಸಿಹಿ ನೀರು, ಫಲವತ್ತಾದ ನೀರು ಬರಬೇಕು. ಅದಿಲ್ಲವಾದರೆ ಮೀನು ಸಂತತಿ ಬೆಳೆಯಲು ಅನುಕೂಲಕರ ವಾತಾವರಣ ಇರುವುದಿಲ್ಲ. ನದಿಯ ನೀರು ಸಮುದ್ರ ಸೇರದಿದ್ದರೆ ಅದು ಇಡೀ ನೀರಿನ ಚಕ್ರವನ್ನೇ ಗೊಂದಲಕ್ಕೆ ಸಿಲುಕಿಸುತ್ತದೆ. ಎಷ್ಟು ಪ್ರಮಾಣದಲ್ಲಿ ನದಿಯ ನೀರು ಸಾಗರವನ್ನು ಸೇರುತ್ತದೆ ಎಂಬುದು, ಮುಂಗಾರಿನ ಸಮಯದಲ್ಲಿ ಎಷ್ಟು ಮಳೆಯಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ನದಿಯು ಸಾಗರ ತಲುಪುವುದನ್ನು ತಡೆಯುವುದರಿಂದ ಕಡಲತೀರದ ಪ್ರದೇಶಗಳಿಗೂ ಹಾನಿಯಾಗುತ್ತದೆ. ಲವಣಯುಕ್ತ (ಉಪ್ಪಿನಂಶದ) ನೀರು ಅಂತರ್ಜಲದ ಒಳನುಗ್ಗುತ್ತದೆ’ ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನಿಯೋಜಿಸಿದ್ದ ತಜ್ಞರ ವರದಿ ಹೇಳಿದೆ.
ಪಶ್ಚಿಮ ಘಟ್ಟದ ನದಿ ಕಣಿವೆಗಳ ಸಂರಕ್ಷಣೆ ಮಹತ್ವ ಮತ್ತು ಈ ಬೃಹತ್ ಯೋಜನೆಗಳಿಂದ ಆಗುವ ಅಪಾಯಗಳ ಕುರಿತು ತಜ್ಞರೊಂದಿಗೆ ಸಮಾಲೋಚಿಸಲು ಶನಿವಾರ (ಡಿ.13) ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ವಿಚಾರಗೋಷ್ಠಿಯನ್ನು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದೆ. ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ತೇಜಸ್ವಿನಿ ಅನಂತಕುಮಾರ್, ಉಲ್ಲಾಸ್ ಕಾರಂತ, ಟಿ.ವಿ. ರಾಮಚಂದ್ರ, ಶ್ರೀನಿವಾಸ ರೆಡ್ಡಿ, ಸುರೇಶ್ ಹೆಬ್ಳೀಕರ್ ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ನದಿ ಜೋಡಣೆ, ಪಂಪ್ಡ್ ಸ್ಟೋರೇಜ್, ವಾಣಿಜ್ಯ ಬಂದರು ಯೋಜನೆಗಳ ಕಾರ್ಯಾನುಷ್ಠಾನದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವ ಅಗತ್ಯವಿದೆ. ಯೋಜನೆ ವಿರೋಧಕ್ಕೆ ಸೂಕ್ತ ದತ್ತಾಂಶ ಸಂಗ್ರಹಿಸಲಾಗಿದೆಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸ್ವರ್ಣವಲ್ಲೀ ಮಠ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ
ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಮುಗಿದ ಬಗ್ಗೆ ಈ ಹಿಂದೆಯೇ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿರುವುದು ಗೊಂದಲ ಮೂಡಿಸುತ್ತಿದೆಅನಂತ ಹೆಗಡೆ ಅಶೀಸರ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ
ಬೇಡ್ತಿ–ವರದಾ ನದಿ ಜೋಡಿಸುವ ಯೋಜನೆ ಪ್ರಸ್ತಾವ ಮೂರು ದಶಕಗಳಿಂದ ಇದೆ. ನೀರಾವರಿ ಬಳಕೆಗೆ ಯೋಜನೆ ಜಾರಿ ಅಗತ್ಯವಿದೆ. ಈಗ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆಬಸವರಾಜ ಬೊಮ್ಮಾಯಿ, ಹಾವೇರಿ ಸಂಸದ
ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯವನ್ನು ಅಧ್ಯಯನ ಮಾಡದೆ ಯಾವುದೇ ಬೃಹತ್ ಯೋಜನೆ ಜಾರಿಗೆ ತರುವ ಕೆಲಸ ಆಗಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಜವಾಬ್ದಾರಿ ನಿಭಾಯಿಸಬೇಕುವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಸಂಸದ
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.