ಶಿರಸಿ: ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹಾಗೂ ಹೆಚ್ಚಿನ ಆಸನದ ವ್ಯವಸ್ಥೆಯಿರುವ ಬಸ್ ಬಿಡುವಂತೆ ಆಗ್ರಹಿಸಿ ತಾಲ್ಲೂಕಿನ ಸೋಂದಾ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಗುರುವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
‘ಶಿರಸಿಯಿಂದ ಸೋಂದಾಕ್ಕೆ ಬೆಳಿಗ್ಗೆ 7.30ಕ್ಕೆ ಬಿಡುವ ಬಸ್ ಸಮಯದಲ್ಲಿ ವ್ಯತ್ಯಾಸ ಆಗುತ್ತಿದೆ. ಶಾಲಾ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತರಗತಿಗೆ ತೆರಳಲು ಇದರಿಂದ ಸಾಧ್ಯವಾಗುತ್ತಿಲ್ಲ. ಒಂದೇ ಬಸ್ ಇರುವುದರಿಂದ ಓಡಾಟದ ಸಮಯದಲ್ಲೂ ವ್ಯತ್ಯಾಸ ಆಗುತ್ತಿದೆ. ಜೂನ್ ತಿಂಗಳಿನಿಂದ ಸಮಸ್ಯೆ ಉಲ್ಬಣಿಸುತ್ತಿದ್ದು, ವಿದ್ಯಾರ್ಥಿಗಳಿಗೆ ತೀರಾ ತೊಂದರೆ ಆಗುತ್ತಿದೆ’ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
‘ಬೆಳಿಗ್ಗೆ 8.30ಕ್ಕೆ ಸೋಂದಾದಿಂದ ಹೊರಡುವ ಬಸ್‌ಗೆ ಶಾಲಾ ಮಕ್ಕಳು ಸುಮಾರು 80 ಹಾಗೂ 25 ಸಾರ್ವಜನಿಕರು ಪ್ರತಿ ದಿನ ಪ್ರಯಾಣ ಮಾಡುತ್ತಾರೆ. ಆದ್ದರಿಂದ ಈ ಬಸ್ ಅನ್ನು ನಿಗದಿತ ಸಮಯಕ್ಕೆ ಸೋಂದಾದಿಂದ ಮರಳುವ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಸೀಟ್ ವ್ಯವಸ್ಥೆ ಇರುವ ಬಸ್ ಅನ್ನು ಸೋಂದಾಕ್ಕೆ ಬಿಡಬೇಕು ಇಲ್ಲವೇ ಈ ಸಮಯಕ್ಕೆ ಮತ್ತೊಂದು ಬಸ್ ವ್ಯವಸ್ಥೆ ಮಾಡಬೇಕು’ ಎಂದರು.
‘ಮಧ್ಯಾಹ್ನ ಶಿರಸಿಯಿಂದ ಸೋಂದಾಕ್ಕೆ ಬಿಡುವ ಬಸ್ಸನ್ನು 3.15ಕ್ಕೆ ಬದಲಾಗಿ 3.30ಕ್ಕೆ ಬಿಡಬೇಕು, ಸೋಂದಾದಿಂದ 4.30ಕ್ಕೆ ಮರಳುವ ವ್ಯವಸ್ಥೆ ಮಾಡಿಕೊಡಬೇಕು. ಜತೆಗೆ, ಔಡಾಳ ಬಸ್ ಸಮಯದಲ್ಲೂ ಬದಲಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು. ಈ ವೇಳೆ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಅಧಿಕಾರಿ ಮಹೇಶ ಅವರಿಗೆ ಮನವಿ ನೀಡಿದರು.
ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಹೆಗಡೆ, ಉಪಾಧ್ಯಕ್ಷೆ ಭಾರತಿ ಚನ್ನಯ್ಯ, ಸದಸ್ಯರಾದ ಗಜಾನನ ನಾಯ್ಕ, ಮಂಜುನಾಥ ಭಂಡಾರಿ, ಮಮತಾ ಜೈನ, ನಾಗರಾಜ ಪೂಜಾರಿ, ಕುಮುದ್ವತಿ, ಪ್ರಮುಖರಾದ ಅಕ್ಷತಾ, ಗಣೇಶ ಜೋಶಿ, ರಾಮಚಂದ್ರ ಹೆಗಡೆ, ವೆಂಕಟ್ರಮಣ ಹೆಗಡೆ, ಚಂದ್ರಹಾಸ ಜೈನ್, ಮಧುಸೂದನ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.