ADVERTISEMENT

ಭಕ್ತರ ನೆರವಿನಲ್ಲಿ ಮಾರಿಕಾಂಬಾ ದೇಗುಲ ಜೀರ್ಣೋದ್ಧಾರ

ಅಕ್ಷಯ ತೃತೀಯದ ದಿನ ನಿಧಿ, ವಸ್ತು ಸಂಗ್ರಹ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 12:17 IST
Last Updated 7 ಮೇ 2019, 12:17 IST
ಶಿರಸಿಯ ಮಾರಿಕಾಂಬಾ ದೇವಾಲಯದ ದೇಣಿಗೆ ಸಂಗ್ರಹ ಅಭಿಯಾನದ ಫಲಕಕ್ಕೆ ಜಿಲ್ಲಾ ನ್ಯಾಯಾಧೀಶ ನಾರಾಯಣ ಚಾಲನೆ ನೀಡಿದರು
ಶಿರಸಿಯ ಮಾರಿಕಾಂಬಾ ದೇವಾಲಯದ ದೇಣಿಗೆ ಸಂಗ್ರಹ ಅಭಿಯಾನದ ಫಲಕಕ್ಕೆ ಜಿಲ್ಲಾ ನ್ಯಾಯಾಧೀಶ ನಾರಾಯಣ ಚಾಲನೆ ನೀಡಿದರು   

ಶಿರಸಿ: ದಕ್ಷಿಣ ಭಾರತ ಶಕ್ತಿಪೀಠಗಳಲ್ಲೊಂದಾಗಿರುವ ಇಲ್ಲಿನ ಮಾರಿಕಾಂಬಾ ದೇಗುಲ ಹಾಗೂ ಸಮೂಹ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಅಕ್ಷಯ ತೃತೀಯದ ದಿನ ಮಂಗಳವಾರ ಜಿಲ್ಲಾ ನ್ಯಾಯಾಧೀಶ ನಾರಾಯಣ ಅವರು ಚಾಲನೆ ನೀಡಿದರು.

ಭಕ್ತದಿಂದ ವಿವಿಧ ರೀತಿಯಲ್ಲಿ ನೆರವು ಸ್ವೀಕರಿಸಿ ದೇವಾಲಯ ಅಭಿವೃದ್ಧಿಗೊಳಿಸುವ ವಿಶಿಷ್ಟ ಯೋಜನೆ ಇದಾಗಿದೆ. ಅಭಿಯಾನವನ್ನು ಸ್ವರ್ಣ, ತಾಮ್ರ, ಶಿಲೆ, ಕಾಷ್ಠ ಹೀಗೆ ನಾಲ್ಕು ರೀತಿಯಲ್ಲಿ ವಿಂಗಡಿಸಲಾಗಿದೆ.

ಏನಿದು ಅಭಿಯಾನ?:

ADVERTISEMENT

ಬಂಗಾರದ ಉತ್ಸವ ಮೂರ್ತಿ, ಗರ್ಭಗುಡಿ ಗೋಪುರಕ್ಕೆ ಬಂಗಾರದ ಕವಚ ಜೋಡಣೆ, ಕಳಶ ಸ್ಥಾಪನೆಗೆ ಅಂದಾಜು 1 ಕ್ವಿಂಟಲ್ ಬಂಗಾರ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಒಬ್ಬ ಭಕ್ತ ಒಂದು ಗ್ರಾಂ ಶುದ್ಧ ಬಂಗಾರ ನೀಡಬಹುದು ಅಥವಾ ಬಂಗಾರದ ಬೆಲೆ ₹ 3510 ಪಾವತಿಸಬಹುದು. ಬಂಗಾರದ ಆಭರಣ ನೀಡುವವರು ಸ್ವರ್ಣಾಭಿಯಾನದ ಹುಂಡಿಯಲ್ಲಿ ಹಾಕಬಹುದು.

ದೇವಸ್ಥಾನದ ಮುಖಮಂಟಪ, ಚಂದ್ರಶಾಲೆ, ಬೆಣ್ಣೆ ಮಾರುತಿ ದೇವಸ್ಥಾನ, ಎಣ್ಣೆ ಆಂಜನೇಯ ದೇವಸ್ಥಾನ, ಗಣಪತಿ ದೇವಸ್ಥಾನ, ಭೂತರಾಜ ದೇವಸ್ಥಾನಕ್ಕೆ ತಾಮ್ರದ ಹೊದಿಕೆ ಹೊದೆಸಲು ಅಂದಾಜು 50 ಟನ್ ತ್ರಾಮ ಬೇಕಾಗಬಹುದು. ಅದಕ್ಕೆ ಭಕ್ತರು, ಒಂದು ತಾಮ್ರದ ತಗಡಿನ ಬೆಲೆ ₹ 4500 ಕೊಡಬಹುದು. ಈ ಅಭಿಯಾನದಲ್ಲಿ ಭಾಗವಹಿಸುವವರು ಮನೆಯಲ್ಲಿರುವ ಹಳೆಯ ತಾಮ್ರದ ವಸ್ತುಗಳನ್ನು ಸಹ ನೀಡಬಹುದು.

ದೇವಾಲಯದ ಗರ್ಭಗುಡಿ ನಿರ್ಮಾಣ, ಬೆಣ್ಣೆ ಆಂಜನೇಯ, ಎಣ್ಣೆ ಆಂಜನೇಯ ದೇವಸ್ಥಾನ, ಗಣಪತಿ ದೇವಸ್ಥಾನ, ಭೂತರಾಜ ಗುಡಿ ನಿರ್ಮಾಣಕ್ಕೆ ಅಂದಾಜ 5000 ಕ್ಯೂಬಿಕ್ ಮೀಟರ್ ಕೃಷ್ಣ ಶಿಲೆ ಅಗತ್ಯವಿದೆ. ಈ ಅಭಿಯಾನದಲ್ಲಿ ಭಾಗವಹಿಸುವವರು ಒಂದು ಶಿಲೆಗೆ ₹ 2160 ಹಣ ಪಾವತಿಸಬಹುದು.

ದೇವಾಲಯದ ಮುಖಮಂಟಪ, ಗರ್ಭಗುಡಿ, ಚಂದ್ರಶಾಲೆ, ಭೂತರಾಜ ದೇವಸ್ಥಾನ, ಎಣ್ಣೆ ಆಂಜನೇಯ, ಬೆಣ್ಣೆ ಮಾರುತಿ, ಗಣಪತಿ ದೇವಸ್ಥಾನದ ಮೇಲ್ಚಾವಣಿ, ಮರದ ಹಾಸು, ಕುಸುರಿ ಕೆತ್ತನೆಯ ಸೀಲಿಂಗ್ ನಿರ್ಮಾಣಕ್ಕೆ ಸಾಗುವಾನಿ, ಶಿವಣೆ ಜಾತಿಯ ಸುಮಾರು 5000 ಸಿಎಫ್‌ಟಿ ಕಟ್ಟಿಗೆ ಸಂಗ್ರಹಿಸಬೇಕಾಗಿದೆ. ಈ ಅಭಿಯಾನಕ್ಕೆ ನೆರವಾಗುವವರು ಒಂದು ಸಿಎಫ್‌ಟಿಗೆ ₹ 5400 ಧನಸಹಾಯ ನೀಡಬಹುದು. ಕಟ್ಟಿಗೆ ಇದ್ದಲ್ಲಿ ದಾಖಲೆ ಸಹಿತ ನೀಡಬಹುದು.

ಜಿಲ್ಲಾ ನ್ಯಾಯಾಧೀಶರು ಮಾತನಾಡಿ, ‘ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ದೇವಾಲಯದ ಆಚಾರ–ವಿಚಾರ, ಸಂಪ್ರದಾಯ ಎಲ್ಲದರ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ, ಮೇ ಕೊನೆಯ ವೇಳೆಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ದೇಗುಲದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಭಕ್ತರಿಗೆ ಸ್ಪಷ್ಟ ಮಾಹಿತಿ ನೀಡಬೇಕು’ ಎಂದರು. ಬಾಬುದಾರ ವಿಜಯ ನಾಡಿಗ ಇದ್ದರು. ಉಪಾಧ್ಯಕ್ಷ ಮನೋಹರ ಮಲ್ಮನೆ ಸ್ವಾಗತಿಸಿದರು. ವ್ಯವಸ್ಥಾಪಕ ನರೇಂದ್ರ ಜಾಧವ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.