ADVERTISEMENT

ಶಿರಸಿ | ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ಕಡ್ಡಾಯ: ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:14 IST
Last Updated 21 ಆಗಸ್ಟ್ 2025, 4:14 IST
ಶಿರಸಿ ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ತಿಪ್ಪೆಸ್ವಾಮಿ ಕೆ.ಟಿ. ಮಾತನಾಡಿದರು
ಶಿರಸಿ ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ತಿಪ್ಪೆಸ್ವಾಮಿ ಕೆ.ಟಿ. ಮಾತನಾಡಿದರು   

ಶಿರಸಿ: ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಕೆಡಿಪಿ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೆಸ್ವಾಮಿ ಕೆ.ಟಿ. ಸೂಚಿಸಿದರು. 

ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಆಯೋಗಕ್ಕೆ ಸಾಕಷ್ಟು ದೂರು ಬರುತ್ತಿವೆ. ಇವುಗಳ ನಿಯಂತ್ರಣ ಆಗಬೇಕು ಎಂದರು. 

ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಎಲ್ಲ ಇಲಾಖೆಗಳು ತಮ್ಮ ಕಚೇರಿಗಳಲ್ಲಿ ಶಾಶ್ವತ ಫಲಕಗಳಲ್ಲಿ ಬರೆಸಬೇಕು. ಶಾಲೆಗಳ ಆವರಣದೊಳಗೆ, ವಿದ್ಯಾರ್ಥಿಗಳಿಗೆ ಅಪಾಯವಾಗುವ ರೀತಿ ವಿದ್ಯುತ್ ತಂತಿ, ಟಿಸಿ ಇದ್ದರೆ ಅವುಗಳ ಸ್ಥಳಾಂತರ ಕಡ್ಡಾಯವಾಗಿ ಮಾಡಬೇಕು. ಈ ಬಗ್ಗೆ ದೃಢೀಕರಣ ಅತ್ಯಗತ್ಯ. ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯಿಂದ ತೆರೆದ ಮನೆ ಕಾರ್ಯಕ್ರಮ ಕಡ್ಡಾಯವಾಗಿ ಅನುಷ್ಠಾನ ಆಗಬೇಕು. ಸಸ್ಯ ಶಾಮಲಾ, ಚಿಣ್ಣರ ವನ, ಮಗುವಿಗೊಂದು ಮರ ಕಾರ್ಯಕ್ರಮ ಅನುಷ್ಠಾನ ಆಗಬೇಕು' ಎಂದು ಸೂಚಿಸಿದರು. 

ADVERTISEMENT

‘ಎಲ್ಲ ಕೃಷಿ ಹೊಂಡಗಳು ಫೆನ್ಸಿಂಗ್ ಕಡ್ಡಾಯವಾಗಿ ಮಾಡಬೇಕು. ನಂತರವಷ್ಟೇ ಬಿಲ್ ಮಾಡಬೇಕು. ತಾಲ್ಲೂಕಿನಲ್ಲಿ ಒಟ್ಟು 18 ವಿದ್ಯಾರ್ಥಿ ನಿಲಯಗಳಿದ್ದು, ಮೂಲ ಸೌಲಭ್ಯ ಕಲ್ಪಿಸಬೇಕು. ನಗರಸಭೆಯಿಂದ ಗೀಸರ್ ವ್ಯವಸ್ಥೆ ಕಲ್ಪಿಸಬೇಕು. ಸುರಕ್ಷತೆ, ಊಟದ ಗುಣಮಟ್ಟಕ್ಕೆ ಮಹತ್ವ ನೀಡಬೇಕು. ಸಿಬ್ಬಂದಿ ನಡವಳಿಕೆ ಹಿತವಾಗಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸದಾ ನಿಗಾ ಇಡಬೇಕು. ಒಂದೊಂದು ಇಲಾಖೆಗೆ ಒಂದೊಂದು ವಸತಿ ನಿಲಯದ ಉಸ್ತುವಾರಿ ಹಾಕಬೇಕು’ ಎಂದು ಹೇಳಿದರು.  

‘ಸಿಬ್ಬಂದಿ ವರ್ತನೆ ಸುಧಾರಣೆ ಆಗಬೇಕು. ಮಕ್ಕಳಿಗೂ ಉತ್ತಮ ಸೇವೆ ನೀಡಬೇಕು. ಯಾವ ಮಾರ್ಗದಲ್ಲಿ ಬಸ್ ಅಗತ್ಯವಿದೆ ಅಲ್ಲಿ ಹೆಚ್ಚುವರಿ ಬಸ್ ಬಿಡಬೇಕು. ಬಸ್ಸಿನ ಸಮಸ್ಯೆ, ಬಸ್ಸಿನ ಸಮಯದ ಸಮಸ್ಯೆ ಬಗ್ಗೆ ಶಿಕ್ಷಣ ಇಲಾಖೆ, ಸಾರಿಕೆ ಇಲಾಖೆ ಸಮನ್ವಯಸಾಧಿಸಿ ಸಮಸ್ಯೆ ನಿವಾರಿಸಬೇಕು ಎಂದ ಅವರು, 9 ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು’ ಎಂದರು. 

ಬಿಇಒ ನಾಗರಾಜ ನಾಯ್ಕ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಬರೆಸಲಾಗಿದೆ. ಸಲಹಾ ಪೆಟ್ಟಿಗೆ ಇಡಲಾಗಿದೆ. ಮಕ್ಕಳ ಹಕ್ಕುಗಳ ಕ್ಲಬ್ ರಚಿಸಲಾಗಿದೆ. ಅರಿವು, ಜಾಗೃತಿಗಾಗಿ ಕಾರ್ಯಕ್ರಮ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ, ತಹಶೀಲ್ದಾರ ಗ್ರೇಡ್ 2 ರಮೇಶ ಹೆಗಡೆ ಇತರರಿದ್ದರು. 

ತಾಲ್ಲೂಕಿನಲ್ಲಿ 288 ಅಂಗವಿಕಲ ಮಕ್ಕಳಿದ್ದಾರೆ. ಅವರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯ.
ತಿಪ್ಪೆಸ್ವಾಮಿ ಕೆ.ಟಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ಸಹಾಯವಾಣಿ ಸಂಖ್ಯೆ ಬಸ್‍ನಲ್ಲಿಲ್ಲ
ತಾಲ್ಲೂಕಿನಲ್ಲಿ 148 ಬಸ್ ಸಂಚರಿಸುತ್ತಿದ್ದು ಒಂದು ಬಸ್ಸಿನಲ್ಲಿ ಕೂಡಾ ಮಕ್ಕಳ ಸಹಾಯವಾಣಿ ಸಂಖ್ಯೆ ಇರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ತಿಪ್ಪೆಸ್ವಾಮಿ ಅವರು ಆಯೋಗದಿಂದ ಈ ಕುರಿತ ಸ್ಟಿಕರ್ ನೀಡುವುದಾಗಿಯೂ ಎಲ್ಲ ಬಸ್‍ಗಳಲ್ಲಿ ಜನಸಾಮಾನ್ಯರಿಗೆ ಮಕ್ಕಳಿಗೆ ಕಾಣುವ ಜಾಗದಲ್ಲಿ ಮೂರು ದಿನಗಳೊಳಗೆ ಅಂಟಿಸುವಂತೆ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಅಧಿಕಾರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.