ADVERTISEMENT

ಕರಾವಳಿಯಲ್ಲೂ ಮೈಕೊರೆವ ಚಳಿ

ಮಲೆನಾಡಿನ ಹಳ್ಳಿಗಳಲ್ಲಿ ಹೊಡಚಲು ಬೆಂಕಿ, ಉಣ್ಣೆ ಅಂಗಿ ಧಾರಿಗಳ ಧಾರಾಳ ದರ್ಶನ

ಸಂಧ್ಯಾ ಹೆಗಡೆ
Published 3 ಜನವರಿ 2019, 19:45 IST
Last Updated 3 ಜನವರಿ 2019, 19:45 IST
ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಡೇರಿಗೆ ಹಾಲು ಕೊಡಲು ಬಂದವರು ಬೆಂಕಿ ಎದುರು ನಿಂತು ಚಳಿ ಕಾಯಿಸುತ್ತಾರೆ
ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಡೇರಿಗೆ ಹಾಲು ಕೊಡಲು ಬಂದವರು ಬೆಂಕಿ ಎದುರು ನಿಂತು ಚಳಿ ಕಾಯಿಸುತ್ತಾರೆ   

ಶಿರಸಿ: ನವೆಂಬರ್‌ನಿಂದ ಜನೆವರಿ ತಿಂಗಳ ಕೊನೆಯವರೆಗೆ ಮೈಕೊರೆಯುವ ಚಳಿಯ ಮಜ ಹಾಗೂ ಸಜ ಎರಡನ್ನೂ ಅನುಭವಿಸುವುದು ಮಲೆನಾಡಿನ ಜನರಿಗೆ ಹೊಸತೇನಲ್ಲ. ಆದರೆ, ಸದಾ ಚಲನಶೀಲವಾಗಿರುವ ಕರಾವಳಿ, ಅರೆ ಬಯಲುಸೀಮೆಯ ಜನರು ಈ ಬಾರಿಯ ನಡುಗುವ ಚಳಿಗೆ ಮಂದವಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಥರಗುಟ್ಟುವ ಚಳಿ ಅನುಭವಕ್ಕೆ ಬರುತ್ತಿದೆ. ಕಡಲ ತೀರದಲ್ಲಿರುವ ಕಾರವಾರದಲ್ಲೂ ಕನಿಷ್ಠ ಉಷ್ಣಾಂಶ 22–23 ಡಿಗ್ರಿ ಸೆಲ್ಸಿಯಸ್, ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಹಗಲಿನ ವೇಳೆ ಒಣಹವೆ, ಗಾಳಿಯೊಂದಿಗಿನ ಚಳಿ ಜನರಿಗೆ ವಿಚಿತ್ರ ಅನುಭವ ನೀಡುತ್ತಿದೆ. ಕರಾವಳಿಯ ತಾಲ್ಲೂಕುಗಳ ವಾತಾವರಣವೇ ಅರೆ ಬಯಲುಸೀಮೆಯಂತಿರುವ ಮುಂಡಗೋಡ, ಹಳಿಯಾಳ, ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲಿದೆ.

ಸದಾ ನೆತ್ತಿಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ನೆರಳನ್ನು ಆಶ್ರಯಿಸುತ್ತಿದ್ದ ಮುಂಡಗೋಡ ತಾಲ್ಲೂಕಿನ ಜನರು ಈಗ ಮಧ್ಯಾಹ್ನದ ವೇಳೆಯಲ್ಲೂ ಸೂರ್ಯನಿಗೆ ಮೈಯೊಡ್ಡಿ ನಿಲ್ಲುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಚಳಿಯ ಅಬ್ಬರ ಜೋರಾಗುತ್ತದೆ. ಬೆಳಿಗ್ಗೆ ಸೂರ್ಯೋದಯವಾಗಿ 2–3 ತಾಸು ಕಳೆದರೂ, ಬಿಸಿಲನ್ನು ಹಿಂದಿಕ್ಕಿ, ಚಳಿ ಮೈಯನ್ನು ಆವರಿಸಿಕೊಳ್ಳುತ್ತದೆ. ಚಳಿಯ ಕಾರಣಕ್ಕೆ ರಾತ್ರಿ 8 ಗಂಟೆಯ ಹೊತ್ತಿಗೆ ರಸ್ತೆಗಳು ಜನರಿಲ್ಲದೇ ಬಣಗುಡುತ್ತವೆ. ಗದ್ದೆಯಲ್ಲಿ ಭತ್ತ ಒಕ್ಕುವವರು ಬೆಂಕಿ ಹಾಕಿಕೊಂಡು ಕೆಲಸ ಮಾಡುತ್ತಾರೆ. ಬೆಳಿಗ್ಗೆ ವಾಕಿಂಗ್ ಹೋಗುವ ಹಲವರು ಚಳಿಗೆ ಹೆದರಿ, ಸಮಯ ಬದಲಾಯಿಸಿಕೊಂಡು ಸಂಜೆ ವಾಕಿಂಗ್ ಹೋಗಲು ಶುರು ಮಾಡಿದ್ದಾರೆ. ತಾಲ್ಲೂಕಿನಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ADVERTISEMENT

ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕಿನ ಜನರಿಗೆ ಹಿಮ ಎರಚಿದ ಅನುಭವವಾಗುತ್ತಿದೆ. ಕಾಂಕ್ರೀಟ್‌ ಕಟ್ಟಡಗಳಿಂದ ತುಂಬಿರುವ ಪೇಟೆಯಲ್ಲೇ ಹಗಲಿನಲ್ಲೂ ಚಳಿ ವಾತಾವರಣವಿರುತ್ತದೆ. ಗ್ರಾಮೀಣ ಜನರಂತೂ ಚಳಿಗೆ ತತ್ತರಿಸಿದ್ದಾರೆ. ಸ್ವೇಟರ್, ಮಫ್ಲರ್‌, ಜರ್ಕಿನ್ ಇಲ್ಲದೇ ಮನೆಯಲ್ಲಿರುವುದು ಸಹ ಕಷ್ಟವಾಗಿದೆ. ಸಂಜೆಯಾಗುತ್ತಿದ್ದಂತೆ ಮನೆಯ ಎದುರು ಹೊಡಚಲು (ಬೆಂಕಿ ಹಾಕಿಕೊಂಡು ಕಾಯಿಸುವುದು) ಹಾಕಿಕೊಂಡು, ಸುತ್ತಲೂ ಎಲ್ಲರೂ ಕುಳಿತುಕೊಂಡು ಚಳಿಯಿಂದ ಕೊಂಚ ರಕ್ಷಣೆ ಪಡೆಯುತ್ತಿದ್ದಾರೆ.

ಬಿಸಿನೀರು ಅನಿವಾರ್ಯ:‘ತಣ್ಣೀರು ಹಿಮಗಟ್ಟಿದಂತೆ ಆಗುತ್ತದೆ. ಇದನ್ನು ಕುಡಿದರೆ ಚಳಿ ಮೈಯೊಳಗೆ ಇಳಿದ ಅನುಭವವಾಗುತ್ತದೆ. ಹೀಗಾಗಿ, ನೀರನ್ನು ಬಿಸಿ ಮಾಡಿಕೊಂಡು ಕುಡಿಯುವುದು ಅನಿವಾರ್ಯವಾಗಿದೆ. ಹೋಟೆಲ್‌ಗಳಲ್ಲೂ ಜನರು ಬಿಸಿ ನೀರು ಕೇಳಿ ಪಡೆಯುತ್ತಿರುವುದು ಕಾಣುತ್ತಿದೆ. ರಾತ್ರಿಯಂತೂ ಎರಡು ಕಂಬಳಿ, ರಗ್ಗು ಹೊದ್ದುಕೊಂಡರೂ ಚಳಿ ತೂರಿಕೊಂಡು ಒಳ ಬರುತ್ತದೆ. ಚಳಿ ತಾಳಲಾರದೇ, ಬೆಳಿಗ್ಗೆ ವಾಕಿಂಗ್ ಹೋಗುವವರ ಸಂಖ್ಯೆ ವಿರಳವಾಗಿದೆ. ಮಳೆಗಾಲದಲ್ಲಿಯೂ ದಿನದ 24 ಗಂಟೆ ಸುತ್ತುತ್ತಿದ್ದ ಫ್ಯಾನ್‌ಗಳು, ಎಸಿ, ಕೂಲರ್‌ಗಳು ನಾಲ್ಕೈದು ದಿನಗಳಿಂದ ವಿಶ್ರಾಂತಿ ಪಡೆಯುತ್ತಿವೆ’ ಎನ್ನುತ್ತಾರೆ ರಾಜು ಹೆಗಡೆ.

‘ಶಿರಸಿಯ ಹೊಸಪೇಟೆ ರಸ್ತೆಯಲ್ಲಿ ಗುರುವಾರ ನಸುಕಿನ 5.50 ಗಂಟೆಗೆ 14 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಇದು ಪ್ರವಾಸಿ ಕೇಂದ್ರವಾಗಿರುವ ಮಡಿಕೇರಿಯ ವಾತಾವರಣವನ್ನು ನೆನಪಿಸುತ್ತದೆ ’ಎನ್ನುತ್ತಾರೆ ಡಾ.ರವಿಕಿರಣ ಪಟವರ್ಧನ.

*
ಶಿರಸಿಯಲ್ಲಿ ಗುರುವಾರ ಕನಿಷ್ಠ 7.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಈ ಋತುವಿನಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನವಾಗಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 6ರಿಂದ 7 ಕಿ.ಮೀ ಇದೆ.
-ಸಂಜೀವಕುಮಾರ ಎಲೆದಳ್ಳಿ,ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.