
ಕಾರವಾರ: ಏಸುಕ್ರಿಸ್ತನ ಜನ್ಮದಿನದ ಅಂಗವಾಗಿ ಕ್ರೈಸ್ತ ಧರ್ಮೀಯರು ಆಚರಿಸುವ ಕ್ರಿಸ್‌ಮಸ್‌ಗೆ ಜಿಲ್ಲೆಯ ವಿವಿಧೆಡೆ ಚರ್ಚ್‌ಗಳು ಸಜ್ಜುಗೊಂಡಿವೆ. ಆಕರ್ಷಕ ಗೋದಲಿಗಳು, ಅಲಂಕೃತ ಕ್ರಿಸ್‌ಮಸ್ ಟ್ರೀಗಳು ಕಣ್ಮನ ಸೆಳೆಯುತ್ತಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 210ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಆಚರಣೆ ನಡೆಯಲಿದೆ. ಹಬ್ಬಕ್ಕೆ ವಾರದ ಮುಂಚೆಯೇ ಬಣ್ಣ ಬಳಿದು, ಅಲಂಕರಿಸಿ ಚರ್ಚ್‌ಗಳನ್ನು ಕಂಗೊಳಿಸುವಂತೆ ಮಾಡಲಾಗಿದೆ.
ನಗರದ ಕ್ಯಾಥಡ್ರಲ್ ಚರ್ಚ್, ಹೈಚರ್ಚ್, ಬಿಣಗಾದ ಚರ್ಚ್ ಸೇರಿ ವಿವಿಧೆಡೆಯಲ್ಲಿರುವ ಚರ್ಚುಗಳ ಆವರಣದಲ್ಲಿ ಏಸುವಿನ ಬಾಲ್ಯದ ಜೀವನ ಬಿಂಬಿಸುವ ಗೋದಲಿ ನಿರ್ಮಿಸಲಾಗಿದೆ. ಅಲ್ಲದೇ, ಉಡುಗೊರೆಗಳು, ಹೂವಿನ ಹಾರ, ವಿದ್ಯುದ್ದೀಪ, ಹೊಳೆಯುವ ನಕ್ಷತ್ರಗಳ ಕಲಾಕೃತಿಗಳಿಂದ ಕ್ರಿಸ್‍ಮಸ್ ಗಿಡಗಳನ್ನು ಅಲಂಕರಿಸಲಾಗಿದೆ.
ಹಬ್ಬಕ್ಕೆ ವಾರ ಮುಂಚಿನಿಂದಲೇ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್‌ನ ವಿಶೇಷ ಉಡುಗೊರೆಗಳು, ಸಾಂತಾ ಕ್ಲಾಸ್ ವೇಷಭೂಷಣದ ಧಿರಿಸು, ಆಲಂಕಾರಿಕ ಕ್ರಿಸ್‌ಮಸ್ ಗಿಡಗಳ ಮಾರಾಟ ಜೋರಾಗಿದೆ. ಮೂರು ದಿನಗಳಿಂದ ನಗರದಲ್ಲಿ ವಿವಿಧ ಚರ್ಚ್‌ಗಳ ವತಿಯಿಂದ ಸಾಂತಾ ಕ್ಲಾಸ್ ವೇಷಧಾರಿಗಳ ಮೆರವಣಿಗೆ ನಡೆಯುತ್ತಿದೆ. ಮುಖ್ಯ ರಸ್ತೆಗಳಲ್ಲಿ ಹಾದುಹೋಗುವ ಸೆಂಟಾ ಕ್ಲಾಸ್ ವೇಷಧಾರಿಗಳು ಜನರನ್ನು ರಂಜಿಸುತ್ತ, ಪರಸ್ಪರ ಕೈಕುಲುಕಿ ಹಬ್ಬದ ಶುಭಾಶಯ ಕೋರುತ್ತ ರಂಜಿಸುತ್ತಿದ್ದಾರೆ. ಅವರೊಟ್ಟಿಗೆ ಏಸುಕ್ರಿಸ್ತರ ಬಾಲ್ಯ ಜೀವನ, ಯಶೋಗಾಥೆ ಸಾರುವ ಗೋದಲಿಗಳ ಮೆರವಣಿಗೆಯನ್ನೂ ನಡೆಸಲಾಗುತ್ತಿದೆ.
‘ಬುಧವಾರ ಮಧ್ಯರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದ್ದು, ಧರ್ಮಗುರುಗಳು ಶುಭ ಸಂದೇಶ ನೀಡುತ್ತಾರೆ. ಯುವಕರು, ಯುವತಿಯರು ಕ್ಯಾರಲ್ (ಭಕ್ತಿಗೀತೆ) ಹಾಡುತ್ತಾರೆ. ಗುರುವಾರ ಬೆಳಿಗ್ಗೆಯಿಂದ ಹಬ್ಬದ ಶುಭಾಶಯ ವಿನಿಮಯ, ಬಂಧುಬಾಂಧವರಿಗೆ ಸಿಹಿ ತಿನಿಸು ಹಂಚಲಾಗುತ್ತದೆ’ ಎಂದು ಹೈಚರ್ಚ್‍ನ ಪ್ರಧಾನ ಕಾರ್ಯದರ್ಶಿ ವಿಲ್ಸನ್ ಫರ್ನಾಂಡಿಸ್ ಹೇಳಿದರು.
ಹಬ್ಬಕ್ಕೆ ವಿಶೇಷ ಖಾದ್ಯ
ಹಬ್ಬದ ಅಂಗವಾಗಿ ಕ್ರೈಸ್ತ ಧರ್ಮೀಯರ ಮನೆಗಳಲ್ಲಿ ವಿಶೇಷ ಖಾದ್ಯವಾಗಿ ಚಕ್ಕುಲಿ ಕರ್ಜಿಕಾಯಿ ನೆವರೆ ಕೇಕ್‍ಗಳನ್ನು ಸಿದ್ಧಪಡಿಸಲಾಗಿದೆ. ‘ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಖಾದ್ಯಕ್ಕಿಂತ ಹಬ್ಬಕ್ಕೆ ಮನೆಯಲ್ಲೇ ಸಿಹಿಖಾದ್ಯ ತಯಾರಿಸುವುದು ವಾಡಿಕೆ. ಕೇಕ್‌ಗಳ ಜೊತೆಗೆ ವಿಶೇಷ ತಿನಿಸುಗಳನ್ನು ತಯಾರಿಸಿ ಅವುಗಳನ್ನು ಸಮಪಾಲು ಮಾಡಿ ಸ್ನೇಹಿತರು ಬಂಧುಗಳಿಗೆ ಹಂಚುತ್ತೇವೆ’ ಎನ್ನುತ್ತಾರೆ ಪಲ್ಲವಿ ಡಿಸೋಜಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.