ADVERTISEMENT

ಗೋಕರ್ಣ: ಚಿಪ್ಪಿ ಗಣಿಗಾರಿಕೆ; ಪರ, ವಿರೋಧಿಗಳ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:58 IST
Last Updated 1 ಡಿಸೆಂಬರ್ 2021, 6:58 IST

ಗೋಕರ್ಣ: ಚಿಪ್ಪಿ ಗಣಿಗಾರಿಕೆ ನಡೆಯುತ್ತಿದ್ದ ಇಲ್ಲಿಯ ಸಮೀಪದ ಹೊಸ್ಕಾಟ್ಟದಲ್ಲಿ ಚಿಪ್ಪಿ ತೆಗೆಯುತ್ತಿದ್ದವರ ಮತ್ತು ಚಿಪ್ಪಿ ತೆಗೆಯುವುದನ್ನು ವಿರೋಧಿಸುತ್ತಿರುವವರ ನಡುವೆ ಮಂಗಳವಾರ ಹೊಡೆದಾಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಬಗ್ಗೆ ಎರಡೂ ತಂಡದವರು ಪರಸ್ಪರ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದಾರೆ. ಚಿಪ್ಪಿ ತೆಗೆಯುವ ಗುತ್ತಿಗೆದಾರರು ತಾವು ಚಿಪ್ಪಿಯನ್ನು ಟಿಪ್ಪರಿನಲ್ಲಿ ತುಂಬುತ್ತಿರುವಾಗ ಕೆಲವರು ಬಂದು ನಮಗೆ ಹಾನಿಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚಿಪ್ಪಿ ತೆಗೆಯುವದನ್ನು ವಿರೋಧಿಸುತ್ತಿರುವವರೂ ಸಹ ತಮ್ಮ ಮೇಲೆ ಗುತ್ತಿಗೆದಾರರ ಪರ ಇರುವ ಕೆಲವರು ಹಲ್ಲೆ ಮಾಡಿರುವ ಬಗ್ಗೆ ದೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಮಾರಾಟ: ಇಬ್ಬರ ಬಂಧನ

ADVERTISEMENT

ಹೊನ್ನಾವರ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಇಡಗುಂಜಿ ಕ್ರಾಸ್ ಸಮೀಪ ವಿನಾಯಕ ವನದಲ್ಲಿ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಹಾಬಲೇಶ್ವರ ಎಸ್.ಎನ್.ನೇತೃತ್ವದ ಪೊಲೀಸ್ ತಂಡ ಮಂಗಳವಾರ ಬಂಧಿಸಿದೆ.

ಗುಣವಂತೆಯ ಜಗದೀಶ ಶಂಭು ಗೌಡ ಹಾಗೂ ಭಟ್ಕಳ ತಾಲ್ಲೂಕಿನ ಹನೀಫಾಬಾದ್ ನಿವಾಸಿ ರಿಜ್ವಾನ್ ಬಂಧಿತರು. ಆರೋಪಿಗಳ ವಿರುದ್ಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಜಗದೀಶ ರಿಜ್ವಾನ್ ಎಂಬಾತನಿಂದ ಸುಮಾರು ₹ 6 ಸಾವಿರ ಮೌಲ್ಯದ 60 ಗ್ರಾಂ ಗಾಂಜಾ ಖರೀದಿಸಿ ಸ್ಕೂಟಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ನಿಂದ ಬಿದ್ದ ಮಹಿಳೆ: ಗಾಯ

ಕುಮಟಾ: ಚಿಕಿತ್ಸೆಗೆಂದು ಆಸ್ಪತ್ರೆಗೆ ಬರಲು ಬಸ್ಸಿನಿಂದ ಕೆಳಗೆ ಇಳಿಯುವಾಗ ಮಹಿಳೆಯೊಬ್ಬರು ಮಂಗಳವಾರ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಈ ಸಂಬಂಧ ಚಾಲಕ, ನಿರ್ವಾಹಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಿಯಮ್ಮ ಗೌಡ ಎಂಬುವವರು ಗಾಯಗೊಂಡವರು. ಅವರು ಡಯಾಲಿಸಿಸ್‌ಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕುಮಟಾ– ಭಟ್ಕಳ ಬಸ್‌ನಲ್ಲಿ ಬಂದಿದ್ದರು. ಬಗ್ಗೋಣ ಕ್ರಾಸ್‌ನಲ್ಲಿ ಬಸ್‌ನಿಂದ ಇಳಿಯುತ್ತಿದ್ದಾಗಲೇ ನಿರ್ವಾಹಕ ಸೀಟಿ ಊದಿದರು. ಆಗ ಚಾಲಕ ಬಸ್ ಚಲಾಯಿಸಿದ್ದರಿಂದ ಅವರು ಬಿದ್ದು, ತೊಡೆಯ ಮೂಳೆ ಮುರಿದಿದೆ ಎಂದು ಮಹಿಳೆಯ ಪತಿ ಗೋಕರ್ಣದ ಹುಲಿಯಪ್ಪ ಗೌಡ ದೂರಿನಲ್ಲಿ ತಿಳಿಸಿದ್ದಾರೆ.

ಟ್ಯಾಂಕರ್ ಚಾಲಕನ ಮೇಲೆ ಹಲ್ಲೆ: ದೂರು

ಕುಮಟಾ: ತಾಲ್ಲೂಕಿನ ಮಿರ್ಜಾನ್‌ನಲ್ಲಿ ಸೋಮವಾರ ರಾತ್ರಿ ಕಾರಿನಲ್ಲಿ ಬಂದು ಟ್ಯಾಂಕರ್‌ ಅನ್ನು ಅಡ್ಡಗಟ್ಟಿದ ಇಬ್ಬರು, ಅದರ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಂದಬೆಟ್ಟು ಗ್ರಾಮದ ಅಕ್ಷಯಕುಮಾರ ಗೌಡ ಎಂದು ಗುರುತಿಸಲಾಗಿದೆ. ಟ್ಯಾಂಕರ್ ಮಂಗಳೂರಿನಿಂದ ಪೆಟ್ರೋಲ್ ತುಂಬಿಕೊಂಡು ವಿಜಯಪುರಕ್ಕೆ ಹೋಗುತ್ತಿತ್ತು. ಮಿರ್ಜಾನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್ ಅನ್ನು ಓವರ್‌ಟೇಕ್ ಮಾಡಿದ ಕಾರಿನಲ್ಲಿದ್ದವರು, ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದರು. ಇದನ್ನು ತಪ್ಪಿಸಲು ಹೋದ ಮತ್ತೊಂದು ಟ್ಯಾಂಕರ್‌ನ ಸಹಾಯಕ, ಬೆಳ್ತಂಗಡಿಯ ಮಲವಂತಿಗೆಯ ರಂಜಿತಕುಮಾರ ಶೆಟ್ಟಿ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.