ADVERTISEMENT

ದೇವಸ್ಥಾನಗಳ ಸರ್ಕಾರೀಕರಣ ತಡೆಗೆ ಕಾನೂನು ಬೇಕು

ವಾರ್ಷಿಕ ಸಭೆಯಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 14:29 IST
Last Updated 5 ಡಿಸೆಂಬರ್ 2021, 14:29 IST
ಶಿರಸಿಯಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ವಾರ್ಷಿಕ ಸಭೆಯನ್ನು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು
ಶಿರಸಿಯಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ವಾರ್ಷಿಕ ಸಭೆಯನ್ನು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು   

ಶಿರಸಿ: ಹಿಂದೂ ದೇವಾಲಯಗಳ ಸರ್ಕಾರೀಕರಣ ತಡೆಗೆ ಸೂಕ್ತ ಕಾನೂನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವದು ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಡಿ.28 ರಂದು ಮುಖ್ಯಮಂತ್ರಿ ಭೇಟಿ ಮಾಡಲಾಗುವುದು. ಈ ವೇಳೆ ದೇವಸ್ಥಾನಗಳ ಸ್ವಾಯತತ್ತೆಗೆ ಅಗತ್ಯ ಕಾನೂನು ರೂಪಿಸುವ ಕುರಿತು ಅವರಿಗೆ ಮನದಟ್ಟು ಮಾಡಲಾಗುವುದು‌’ ಎಂದರು.

ADVERTISEMENT

‘ಈ ಹಿಂದಿನ ಮುಜರಾಯಿ ಸಚಿವರು ಹೊಸ ಕಾಯ್ದೆ ರೂಪಿಸಲು ತಜ್ಞರ ಸಮಿತಿ ಭರವಸೆ ನೀಡಿದ್ದರು. ಅದು ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ದೇವಸ್ಥಾನಗಳ ಸರ್ಕಾರೀಕರಣದ ಪ್ರಯತ್ನ ತಡೆಯುವ ಹೋರಾಟ ಮುಂದುವರಿಯಲಿದೆ’ ಎಂದರು.

‘ದೇವಸ್ಥಾನಗಳ ರಕ್ಷಣೆ ವಿಚಾರದಲ್ಲಿ ಮಹಾಮಂಡಳ ಒಗ್ಗಟ್ಟಾಗಿ ಮುಂದುವರಿಯಬೇಕು. ಲೆಕ್ಕಪತ್ರ ನಿರ್ವಹಣೆಯಲ್ಲೂ ಪಾರದರ್ಶಕತೆ ಕಾಯ್ದುಕೊಂಡು ಸದಸ್ಯರ ನಂಬಿಕೆ ಗಟ್ಟಿಗೊಳಿಸಬೇಕು’ ಎಂದು ಸಲಹೆ ನೀಡಿದರು.

ಹೈಕೋರ್ಟ್ ವಕೀಲ ಅರುಣಾಚಲ ಹೆಗಡೆ ಮಾತನಾಡಿ, ‘ದೇವಸ್ಥಾನಗಳಿಗೆ ವ್ಯವಸ್ಥಾಪನಾ ರಚಿಸುವ ಸರ್ಕಾರದ ಕ್ರಮದ ವಿರುದ್ಧ ಸುಪ್ರಿಂಕೋರ್ಟ್‍ನಲ್ಲಿ ದಾಖಲಾಗಿರುವ ಅರ್ಜಿಯ ಅಂತಿಮ ವಿಚಾರಣೆ ಜನವರಿಯಲ್ಲಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲ ಹಿಂದೂ ಧಾರ್ಮಿಕ ದೇವಸ್ಥಾನಗಳು ಮಹಾಮಂಡಳದ ಸದಸ್ಯತ್ವ ಪಡೆದುಕೊಳ್ಳುವಂತಾಗಲು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಮಹಾಮಂಡಳದ ಕಾರ್ಯಾಧ್ಯಕ್ಷ ರವೀಂದ್ರ ಜಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗೋಪಾಲಕೃಷ್ಣ ವೈದ್ಯ ನಿರ್ವಹಿಸಿದರು. ಮಹಾಮಂಡಳದ ಉಪಾಧ್ಯಕ್ಷ ಟಿ.ಜಿ.ನಾಡಿಗೇರ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳಾದ ಸುಧೇಶ ಜೋಗಳೇಕರ್, ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಎಸ್. ಪಿ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.