ADVERTISEMENT

ಪುರಸಭೆಯಿಂದ ಸಾವಯವ ಗೊಬ್ಬರ ಮಾರಾಟ

ಕುಮಟಾದ ಸಂತೆ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಗಮನ ಸೆಳೆದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:00 IST
Last Updated 18 ಡಿಸೆಂಬರ್ 2019, 13:00 IST
ಕುಮಟಾದಲ್ಲಿ ಬುಧವಾರ ಸಂತೆ ಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ಹಸಿ ಕಸದಿಂದ ತಯಾರಿಸಿದ ಸಾವಯವ ಗೊಬ್ಬರ ಮಾರಾಟ ಮಾಡುತ್ತಿರುವುದು.
ಕುಮಟಾದಲ್ಲಿ ಬುಧವಾರ ಸಂತೆ ಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ಹಸಿ ಕಸದಿಂದ ತಯಾರಿಸಿದ ಸಾವಯವ ಗೊಬ್ಬರ ಮಾರಾಟ ಮಾಡುತ್ತಿರುವುದು.   

ಕುಮಟಾ: ‘ಬನ್ನಿ, ಇದು ತರಕಾರಿ, ಹಣ್ಣುಗಳ ಸಿಪ್ಪೆ ಮುಂತಾದ ಹಸಿ ತ್ಯಾಜ್ಯದಿಂದ ನಿರ್ಮಿಸಿದ ಉತ್ಕೃಷ್ಟಸಾವಯವ ಗೊಬ್ಬರ. ಇದನ್ನು ಮನೆಯ ತೆಂಗು, ಅಡಿಕೆ, ಬಾಳೆ, ತರಕಾರಿ, ಹೂವು, ಹಣ್ಣಿನ ಗಿಡಗಳಿಗೆ ಬಳಕೆ ಮಾಡಬಹುದು. ಇದರಲ್ಲಿ ರಾಸಾಯನಿಕ ಅಂಶ ಇಲ್ಲವೇ ಇಲ್ಲ. ಮನೆಯ ಕಸವನ್ನು ಗೊಬ್ಬರ ರೂಪದಲ್ಲಿ ಮತ್ತೆ ಮನೆಗಳಿಗೇ ನೀಡುವ ಪ್ರಕ್ರಿಯೆ ಕೂಡ ಇದಾಗಿದೆ...’

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಬುಧವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ತಾವೇ ತಯಾರಿಸಿದ ಸಾವಯವ ಗೊಬ್ಬರ ಮಾರಾಟ ಮಾಡಲು ಜನರಿಗೆ ವಿವರಿಸಿದ ರೀತಿ ಇದು.

ಹೆಚ್ಚಿನ ಮಾಹಿತಿ ನೀಡಿದ ಪುರಸಭೆ ಆರೋಗ್ಯ ಪರಿವೀಕ್ಷಕ ಸೋಮಶೇಖರ ಅಕ್ಕಿ, ‘ಪಟ್ಟಣದ ವಿವಿಧೆಡೆಯಿಂದ ಸಂಗ್ರಹಿಸಿದ ತರಕಾರಿ, ಹಣ್ಣನ್ನು ಸಂಗ್ರಹಿಸಲಾಗುತ್ತದೆ. ಹೆಗಡೆ ಕ್ರಾಸ್ ಪಕ್ಕದ ಚೆನ್ನಮ್ಮ ಉದ್ಯಾನದ ಮೂಲೆಯಲ್ಲಿ ಗೊಬ್ಬರ ತಯಾರಿಸಲಾಗುತ್ತದೆ. ತ್ಯಾಜ್ಯಕ್ಕೆ ಅಲ್ಪ ಪ್ರಮಾಣದ ಸಗಣಿ, ಮಣ್ಣು, ನೀರು ಸೇರಿಸಲಾಗುತ್ತದೆ.ಅದರಲ್ಲಿರುವ ಎನ್.ಪಿ.ಕೆ ಪ್ರಮಾಣ ಧೃಢೀಕರಿಸಲು ಪ್ರಯೋಗಾಲಯಕ್ಕೆ ಕಳುಹಿಸಿ ಪ್ರಮಾಣ ಪತ್ರ ಸಹ ಪಡೆಯಲಾಗಿದೆ’ ಎಂದರು.

ADVERTISEMENT

‘ಗೊಬ್ಬರದಲ್ಲಿ ಯಾವುದೇ ರಾಸಾಯನಿಕ ಅಂಶಗಳು ಇಲ್ಲ. ಆದ್ದರಿಂದ ಮನೆಗಳಲ್ಲಿ ಬೆಳೆಸುವ ತರಕಾರಿ, ಹಣ್ಣಿನ ಗಿಡಗಳಿಗೆ ಈ ಗೊಬ್ಬರ ಉಪಯುಕ್ತವಾಗಿದೆ. ಸಂತೆ ಮಾರುಕಟ್ಟೆ ಮತ್ತು ಪುರಸಭೆಯ ಕಸ ಸಂಗ್ರಹಿಸುವ ವಾಹನದಲ್ಲಿ ನಿತ್ಯ ಕೆ.ಜಿ.ಗೆ ₹ 10ರಂತೆ 10, 5 ಹಾಗೂ 2 ಕೆ.ಜಿ. ಪ್ಯಾಕೇಟ್‌ಗಳಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಲಾಗುತ್ತದೆ. 100 ಕೆ.ಜಿ.ಗೂ ಅಧಿಕ ಪ್ರಮಾಣದ ಬೇಡಿಕೆಯಿದ್ದರೆ ಪುರಸಭೆ ವಾಹನದಲ್ಲಿಯೇ ಗ್ರಾಹಕರಿಗೆ ಸಾಗಾಟ ವೆಚ್ಚವಿಲ್ಲದೆ ಪೂರೈಸಲಾಗುವುದು. ಪುರಸಭೆ ಪ್ರತಿಮೂರು ತಿಂಗಳಿಗೆ ಸುಮಾರು 5 ಟನ್ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದೆ’ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.