ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿಗೆ ಬದ್ಧ: ಸಚಿವ ಶಿವರಾಮ ಹೆಬ್ಬಾರ

ಕನ್ನಡ ರಾಜ್ಯೋತ್ಸವ ಸಲುವಾಗಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 12:22 IST
Last Updated 1 ನವೆಂಬರ್ 2020, 12:22 IST
ಕಾರವಾರದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಕಾರವಾರದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.   

ಕಾರವಾರ: ‘ಸರೋಜಿನಿ ಮಹಿಷಿ ವರದಿಯನ್ನು ಆಧರಿಸಿ ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದ ಏಕೀಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾದುದು. ಇಲ್ಲಿನ ಜನ ಅತ್ಯಂತ ಪ್ರಜ್ಞಾವಂತರು ಹಾಗೂ ಭಾಷೆ, ನೆಲವನ್ನು ಆರಾಧಿಸುವವರು. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರವು ವಿಶೇಷ ಗಮನ ಹರಿಸಿ ಸವಲತ್ತುಗಳನ್ನು ನೀಡುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ತುಕಡಿ, ಕಾರವಾರ ಅರಣ್ಯ ಇಲಾಖೆ ಹಾಗೂ ಗೃಹರಕ್ಷಕ ದಳದಚೆಂಡಿಯಾ ಘಟಕದ ತುಕಡಿಗಳ ಸದಸ್ಯರು ಪಥಸಂಚಲನ ನಡೆಸಿಕೊಟ್ಟರು. ಚಿತ್ತಾಕುಲಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೈಲಾ ಸಾಳುಂಕೆ ಕಾರ್ಯಕ್ರಮ ನಿರೂಪಿಸಿದರು.

‘ಬೆಳಗಾವಿ ನಮ್ಮ ಅವಿಭಾಜ್ಯ ಅಂಗ’: ‘ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಮರಾಠಿಗರು ಮಹಾರಾಷ್ಟ್ರದ ರಾಜಕಾರಣಕ್ಕಾಗಿ ಅಲ್ಲಿನ ಪ್ರಚೋದನೆಯಿಂದ ಪುಂಡಾಟವನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಆದರೆ, ಅದು ಈವರೆಗೆ ಫಲಶ್ರುತಿ ಕಾಣಲಿಲ್ಲ. ಮುಂದೆಯೂ ಯಶಸ್ವಿಯಾಗದು’ ಎಂದು ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

‘ಹಿಂದೆ ವಿಧಾನಸಭೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂ.ಇ.ಎಸ್) ಐವರು ಶಾಸಕರಿದ್ದರು. ಈಗ ಆ ಪಕ್ಷದ ಒಬ್ಬರೂ ಶಾಸಕರಿಲ್ಲ. ಅವರ ಹಿಡಿತ ಅಷ್ಟು ಕೆಳಗೆ ಹೋಗಿದೆ. ಒಬ್ಬರೂ ಶಾಸಕರನ್ನು ಹೊಂದಿರದ ಎಂ.ಇ.ಎಸ್ ಬೆಳಗಾವಿ ತಮ್ಮದು ಎಂದು ಕೂಗುವುದರಲ್ಲಿ ಯಾವ ನ್ಯಾಯವೂ ಇಲ್ಲ’ ಎಂದು ಟೀಕಿಸಿದರು.

ಶಾಸಕಿ ರೂಪಾಲಿ ನಾಯ್ಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಕಾರವಾರ ಉಪವಿಭಾಗಾಧಿಕಾರಿ ಎಂ.ಪ್ರಿಯಾಂಗಾ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.