ಯಲ್ಲಾಪುರ: ತಾಲ್ಲೂಕಿನ ದೇಹಳ್ಳಿ ಗ್ರಾಮದ ಕುಂಬ್ರಾಳದಲ್ಲಿ ಕಾಡಿನ ನಡುವೆ ಅನಧಿಕೃತವಾಗಿ ರಸ್ತೆ ನಿರ್ಮಾಣ ಆರೋಪದಲ್ಲಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷಶ್ರೀಪತಿ ಮುದ್ದೆಪಾಲ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ದೇಹಳ್ಳಿ ಶಾಖೆಯ ಗಣೇಶಗುಡಿ ಬ್ಲಾಕ್ ಮತ್ತು ಕಂಪಾರ್ಟ್‌ಮೆಂಟ್ ಪ್ರದೇಶದಲ್ಲಿ 250 ಮೀಟರ್ ಉದ್ದಕ್ಕೆ ಅನಧಿಕೃತವಾಗಿ ರಸ್ತೆ ನಿರ್ಮಿಸಲಾಗಿದೆ. ಈ ಬಗ್ಗೆ ಗಣೇಶಗುಡಿ ಅರಣ್ಯ ರಕ್ಷಕರ ವರದಿ ಆಧರಿಸಿ ಮೇ 22ರಂದು ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ ಇಲಾಖೆಯಿಂದ ಮುಳ್ಳು ತಂತಿ ಬೇಲಿ ಅಳವಡಿಸಲಾಗಿತ್ತು.
ಆದರೆ, ದೇಹಳ್ಳಿ ಶಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆತ್ತದ ನೆಡುತೋಪು ಕಾರ್ಯದಲ್ಲಿ ನಿರತರಾಗಿರುವುದನ್ನು ಗಮನಿಸಿ, ರಸ್ತೆ ಕಾಮಗಾರಿಯನ್ನು ಮುಂದುವರಿಸಲಾಗಿದೆ. 100 ಮೀಟರ್‌ಗಳಷ್ಟು ರಸ್ತೆ ನಿರ್ಮಿಸಿ, ಮರಗಳನ್ನು ಉರುಳಿಸಿ ಪಕ್ಕಕ್ಕೆ ದೂಡಲಾಗಿದೆ. ಈ ಬಗ್ಗೆ ದೇಹಳ್ಳಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೇ 13ರಂದು ವರದಿ ನೀಡಿದ್ದರು. ಅದನ್ನು ಆಧರಿಸಿ ಅಂದೇ ಪ್ರಕರಣ ದಾಖಲಿಸಲಾಗಿದೆ.
‘ಡಿ.ಸಿ.ಎಫ್ ಗೋಪಾಲಕೃಷ್ಣ ಹೆಗಡೆ ಮಾರ್ಗದರ್ಶನದಲ್ಲಿ ಎ.ಸಿ.ಎಫ್ ಅಶೋಕ ಭಟ್ಟ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಅನಧಿಕೃತವಾಗಿ ನಿರ್ಮಿಸಲಾದ ರಸ್ತೆಯ ಎರಡೂ ಬದಿಗಳಲ್ಲಿ ಕಂದಕ ತೆಗೆದು ಸಸಿಗಳನ್ನು ನೆಡಲಾಗಿದೆ’ ಎಂದು ಆರ್.ಎಫ್.ಒ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.