ADVERTISEMENT

ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ: ಮಾಜಿ ಎಂಎಲ್‌ಸಿ ಎಸ್.ಎಲ್.ಘೋಟ್ನೆಕರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:06 IST
Last Updated 15 ಜನವರಿ 2022, 8:06 IST
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್    

ಶಿರಸಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಉತ್ತರ ಕನ್ನಡ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋಲಲು ಕಾಂಗ್ರೆಸ್ಸಿಗರೇ ಕಾರಣ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಆರೋಪಿಸಿದರು.

ಇಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, 'ಜಿಲ್ಲೆಯಲ್ಲಿ ಕಾಂಗ್ರೆಸ್ ನ ಎರಡು ಬಣಗಳಿವೆ. ಒಂದು ಬಣ ಪಕ್ಷದ ಸಂಘಟನೆ, ಗೆಲುವಿಗೆ ಹಗಲು ರಾತ್ರಿ ದುಡಿಯುತ್ತದೆ. ಎರಡನೇ ಬಣ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಕೆಲಸ ಮಾಡುತ್ತದೆ. ರಾಜಕೀಯವಾಗಿ ಬೆಳೆಯಲು ಈ ಬಣ ಯಾರಿಗೂ ಅವಕಾಶ ನೀಡುತ್ತಿಲ್ಲ' ಎಂದು ದೂರಿದರು.

'ಎರಡನೇ ಬಣವನ್ನು ಮುನ್ನಡೆಸುವವರು ಯಾರು ಎಂದು ಜಿಲ್ಲೆಯ ಜನ ಹಲವು ವರ್ಷದಿಂದ ನೋಡುತ್ತಿದ್ದಾರೆ. ಈ ಬಣದ ನಾಯಕನ ಬಗ್ಗೆ ಎಲ್ಲರಿಗೂ ಗೊತ್ತಿದೆ' ಎಂದು ವ್ಯಂಗ್ಯವಾಡಿದರು.

ADVERTISEMENT

'ಮರಾಠ ಸಮುದಾಯದ ಅಭಿವೃದ್ಧಿಗೆ ಮಂಜೂರಾದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದೇನೆ ಎಂಬ ಆರೋಪದ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಈ ಕೃತ್ಯದ ಹಿಂದೆ ಮಾಜಿ ಸಚಿವ, ಕಾನೂನು ಪದವಿಯ ಗೋಲ್ಡ್ ಮೆಡಲಿಸ್ಟ್ ಮತ್ತು ಬಿಜೆಪಿ, ಜೆಡಿಎಸ್ ಮುಖಂಡರಿದ್ದಾರೆ ಎಂದರು.

'ನನ್ನ ವಿರುದ್ಧ ಮಾಡಲಾದ ಆರೋಪದಲ್ಲಿ ಸತ್ಯಾಂಶವಿಲ್ಲ. ಈ ಆರೋಪ ಮಾಡಿದ ಎನ್.ಎಸ್.ಜೀವೊಜಿ ಒಬ್ಬ ಬ್ಲ್ಯಾಕ್ ಮೇಲರ್. ಆತನ ವಿರುದ್ಧವೇ ಚೆಕ್ ಬೌನ್ಸ್ ಪ್ರಕರಣವಿದೆ. ಜೈಲಿಗೆ ಹೋಗಿ ಬಂದವನ ಮುಂದಿಟ್ಟುಕೊಂಡು ಸುಳ್ಳು ಆರೋಪ ಹೊರಿಸುವ ಕೆಲಸ ಮಾಡಲಾಗುತ್ತಿದೆ. ನನ್ನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಲೋಕಾಯುಕ್ತ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂಬುದೇ ಸುಳ್ಳು. ತಾಕತ್ತಿದ್ದರೆ ಈ ಬಗ್ಗೆ ದಾಖಲೆಯನ್ನು ಜೀವೋಜಿ ನೀಡಲಿ' ಎಂದರು.

'ಮುಂದಿನ ವಿಧಾನಸಭೆ ಚುನಾವಣೆಗೆ ಹಳಿಯಾಳ ಕ್ಷೇತ್ರದಿಂದ ನಾನೂ ಆಕಾಂಕ್ಷಿ ಎಂದು ಘೋಷಿಸಿದ ಬಳಿಕ ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ನಡೆದಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.