ADVERTISEMENT

ಸಂಘ ಪರಿವಾರದ ಆಣತಿಯಂತೆ ಆಡಳಿತ: ರತ್ನಾಕರ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 9:28 IST
Last Updated 27 ಜೂನ್ 2022, 9:28 IST
ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್ ಶಿರಸಿ, ಸಿದ್ದಾಪುರ ತಾಲ್ಲೂಕು ಘಟಕದ ಕಾರ್ಯಕರ್ತರು ಶಿರಸಿ ಬಿಡಕಿಬೈಲಿನಲ್ಲಿ ಧರಣಿ ನಡೆಸಿದರು.
ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್ ಶಿರಸಿ, ಸಿದ್ದಾಪುರ ತಾಲ್ಲೂಕು ಘಟಕದ ಕಾರ್ಯಕರ್ತರು ಶಿರಸಿ ಬಿಡಕಿಬೈಲಿನಲ್ಲಿ ಧರಣಿ ನಡೆಸಿದರು.   

ಶಿರಸಿ: ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್ ಶಿರಸಿ, ಸಿದ್ದಾಪುರ ತಾಲ್ಲೂಕು ಘಟಕದ ಕಾರ್ಯಕರ್ತರು ಇಲ್ಲಿನ ಬಿಡಕಿಬೈಲಿನಲ್ಲಿ ಸೋಮವಾರ ಧರಣಿ ನಡೆಸಿದರು.

ಯುವಕರನ್ನು ತಪ್ಪು ದಾರಿಗೆಳೆಯುವ ಯೋಜನೆ ಇದಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಕುರಗೋಡು ಮಾತನಾಡಿ, ‘ಕೇಂದ್ರ ಸರ್ಕಾರ ಯುವಕರ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈಹಾಕಿದೆ. ಸಂಘ ಪರಿವಾರದ ಆಣತಿಯಂತೆ ಸರ್ಕಾರ ನಡೆಸಲಾಗುತ್ತಿದೆ. ಉದ್ಯೋಗ ಸೃಷ್ಟಿಯ ಭರವಸೆ ಈಡೇರಿಸಲಾಗದ ಸರ್ಕಾರ ಅಗ್ನಿಪಥ ಯೋಜನೆ ಮೂಲಕ‌ ಕಣ್ಣೀರು ಒರೆಸುವ ಯತ್ನದಲ್ಲಿದೆ’ ಎಂದು ಆರೋಪಿಸಿದರು.

ADVERTISEMENT

ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ ಮಾತನಾಡಿ, ‘ಎರಡು ವರ್ಷಗಳಿಂದ ಸೈನ್ಯಕ್ಕೆ ನೇಮಕಾತಿ ನಡೆದಿಲ್ಲ. ಸೈನ್ಯವನ್ನು ದೇಶದ ಭದ್ರತೆ ಕಾಯುವ ಸಂಸ್ಥೆಯಾಗಿಸುವ ಬದಲು ಕೇಂದ್ರ ಸರ್ಕಾರ ಇದನ್ನು ಔದ್ಯೋಗಿಕ ಕೇಂದ್ರವಾಗಿಸಲು ಹೊರಟಿದೆ’ ಎಂದು ಆರೋಪಿಸಿದರು.

ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಆರ್.ಎಂ.ಹೆಗಡೆ ಬಾಳೇಸರ, ದೀಪಕ ದೊಡ್ಡೂರು, ಸತೀಶ ನಾಯ್ಕ, ಶ್ರೀಪಾದ ಹೆಗಡೆ ಕಡವೆ, ಪ್ರವೀಣ ಗೌಡರ್, ಗಣೇಶ ದಾವಣಗೆರೆ, ದೇವರಾಜ ಮರಾಠಿ, ಜ್ಯೋತಿ ಪಾಟೀಲ, ಗೀತಾ ಭೋವಿ, ಗೀತಾ ಶೆಟ್ಟಿ, ಸೀಮಾ ಹೆಗಡೆ, ಪ್ರಸನ್ನ ಶೆಟ್ಟಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.