ADVERTISEMENT

ಕೈಗಾ: 5, 6 ಘಟಕ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 16:07 IST
Last Updated 28 ಏಪ್ರಿಲ್ 2022, 16:07 IST
ಕಾರವಾರ ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಭಾರತೀಯ ಅಣು ವಿದ್ಯುತ್ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಪಾಠಕ್ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಕಾರವಾರ ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಭಾರತೀಯ ಅಣು ವಿದ್ಯುತ್ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಪಾಠಕ್ ಗುರುವಾರ ಭೂಮಿಪೂಜೆ ನೆರವೇರಿಸಿದರು.   

ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಗಿದೆ. ಭಾರತೀಯ ಅಣು ವಿದ್ಯುತ್ ನಿಗಮದ (ಎನ್.ಪಿ.ಸಿ.ಐ.ಎಲ್) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಪಾಠಕ್ ಭೂಮಿಪೂಜೆ ನೆರವೇರಿಸಿದರು.

ಒಟ್ಟು ₹ 21 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆ. ಇಲ್ಲಿ ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳ ಸ್ಥಾಪನೆಗೆ ಅಣುಶಕ್ತಿ ನಿಯಂತ್ರಣ ಮಂಡಳಿಯು (ಎ.ಇ.ಆರ್.ಬಿ) ಮಾರ್ಚ್ 31ರಂದು ಅನುಮತಿ ನೀಡಿತ್ತು. ಕೇಂದ್ರ ಸಚಿವ ಸಂಪುಟವು 2017ರಲ್ಲೇ ಅನುಮೋದಿಸಿತ್ತು.

ಇವುಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಕೈಗಾದಲ್ಲಿ ಒಟ್ಟು 2,280 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಪ್ರಸ್ತುತ ತಲಾ 220 ಮೆಗಾವಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 880 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ADVERTISEMENT

ಕಾಮಗಾರಿಗೆ ಎನ್.ಪಿ.ಸಿ.ಐ.ಎಲ್ ಅಧೀನದಲ್ಲೇ ಇರುವ ಅಂದಾಜು 54.09 ಹೆಕ್ಟೇರ್ ಜಮೀನು ಬಳಕೆಯಾಗಲಿದೆ. ‘ಆತ್ಮನಿರ್ಭರ್ ಭಾರತ’ ಪರಿಕಲ್ಪನೆಯಲ್ಲಿ, ಸಂಪೂರ್ಣ ದೇಸಿ ತಂತ್ರಜ್ಞಾನ ಆಧಾರಿತ ‘ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್’ಗಳು (ಪಿ.ಎಚ್‌.ಡಬ್ಲು.ಆರ್) ನಿರ್ಮಾಣವಾಗಲಿವೆ. ಅವುಗಳಿಗೆ ಬೇಕಾದ ಉಪಕರಣಗಳನ್ನು ಇಲ್ಲಿಯ ಕೈಗಾರಿಕೆಗಳು, ಗುತ್ತಿಗೆದಾರರೇ ಸರಬರಾಜು ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಾನಿಕ ನಿರ್ದೇಶಕ ರಾಜೇಂದ್ರ ಕುಮಾರ ಗುಪ್ತ, ಒಂದು ಮತ್ತು ಎರಡನೇ ಘಟಕಗಳ ನಿರ್ದೇಶಕ ಪಿ.ಜೆ.ರಾಯಚೂರು, ಮೂರು ಮತ್ತು ನಾಲ್ಕನೇ ಘಟಕಗಳ ನಿರ್ದೇಶಕ ಟಿ.ಪ್ರೇಮಕುಮಾರ್, ಐದು ಮತ್ತು ಆರನೇ ಘಟಕಗಳ ನಿರ್ಮಾಣದ ಮುಖ್ಯ ಎಂಜಿನಿಯರ್ ಬಿ.ಕೆ.ಚೆನ್ನಕೇಶವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.