ADVERTISEMENT

ಕಾರವಾರ: ಪ್ರವಾಸಿಗರ ನಿಯಂತ್ರಣದ ಸವಾಲು

ಕಡಲತೀರ: ದಡಕ್ಕೆ ಅಪ್ಪಳಿಸುತ್ತಿದೆ ನಾಲ್ಕು ಮೀಟರ್‌ಗೂ ಎತ್ತರದ ಅಲೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 0:23 IST
Last Updated 11 ಜೂನ್ 2023, 0:23 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಇಳಿಯಲು ಮುಂದಾಗಿದ್ದ ಪ್ರವಾಸಿಗರಿಗೆ ಜೀವರಕ್ಷಕ ಸಿಬ್ಬಂದಿ ಎಚ್ಚರಿಕೆ ನೀಡಿದರು –ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಇಳಿಯಲು ಮುಂದಾಗಿದ್ದ ಪ್ರವಾಸಿಗರಿಗೆ ಜೀವರಕ್ಷಕ ಸಿಬ್ಬಂದಿ ಎಚ್ಚರಿಕೆ ನೀಡಿದರು –ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್   

ಗಣಪತಿ ಹೆಗಡೆ

ಕಾರವಾರ: ಹವಾಮಾನ ವೈಪರೀತ್ಯದ ಪರಿಣಾಮ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಆಳೆತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಮಳೆಗಾಲ ಆರಂಭಗೊಳ್ಳುತ್ತಿದ್ದರೂ ಪ್ರವಾಸಿಗರು ಮಾತ್ರ ಕಡಲತೀರಕ್ಕೆ ಮೋಜಿಗೆ ತೆರಳುವುದು ನಿಂತಿಲ್ಲ.

ಬಿಪೊರ್ ಜಾಯ್ ಚಂಡಮಾರುತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಸರಾಸರಿ 3.5 ರಿಂದ 4.1 ಮೀ. ಎತ್ತರದ ಅಲೆಗಳು ಅಪ್ಪಳಿಸುತ್ತಿವೆ. ಹೀಗಾಗಿ ನೀರಿನಮಟ್ಟದಲ್ಲೂ ಏರಿಕೆಯಾಗಿದ್ದು, ಕಡಲತೀರದಲ್ಲಿ 20 ಮೀಟರ್‌ಗೂ ಹೆಚ್ಚು ದೂರದವರೆಗೆ ಅಲೆಗಳು ಅಪ್ಪಳಿಸುತ್ತಿವೆ.

ADVERTISEMENT

ಶನಿವಾರ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಬೆಳಗಾವಿ, ಇನ್ನಿತರ ಕಡೆಗಳಿಂದ ಬಂದಿದ್ದ ಹತ್ತಾರು ಪ್ರವಾಸಿಗರು ಬಿರುಸಿನ ಅಲೆಯನ್ನೂ ಲೆಕ್ಕಿಸದೆ ಕಡಲಿಗೆ ಇಳಿಯುವ ಪ್ರಯತ್ನ ನಡೆಸುತ್ತಿದ್ದರು. ಅವರಲ್ಲಿ ಪುಟ್ಟ ಮಕ್ಕಳೂ ಇದ್ದರು. ದೂರದ ಊರುಗಳಿಂದ ಬಂದವರಿಗೆ ಕಡಲತೀರದ ಅಪಾಯದ ಅರಿವು ಇರಲಿಲ್ಲ.

ಆದರೆ, ಸಮುದ್ರಕ್ಕೆ ಇಳಿಯದಂತೆ ಜೀವರಕ್ಷಕ ಸಿಬ್ಬಂದಿ ಅವರನ್ನು ತಡೆಯುತ್ತಿದ್ದರೂ ಕೆಲ ಪ್ರವಾಸಿಗರು ಮಾತು ಕೇಳಲು ಸಿದ್ಧರಿರಲಿಲ್ಲ. ಎಚ್ಚರಿಕೆ ಧಿಕ್ಕರಿಸಿ ಕಡಲ ಅಲೆಗಳ ಜತೆ ಆಟಕ್ಕೆ ಇಳಿಯಲು ಮುಂದಾಗುತ್ತಿದ್ದವರನ್ನು ಕಟುವಾಗಿ ಗದರಿ ಹಿಂದಕ್ಕೆ ಕರೆಯಬೇಕಾದ ಅನಿವಾರ್ಯ ಜೀವರಕ್ಷಕ ಸಿಬ್ಬಂದಿಗೆ ಉಂಟಾಯಿತು.

‘ಮುಂಗಾರು ಆರಂಭಕ್ಕೆ ಇನ್ನೂ ಸ್ವಲ್ಪ ತಡವಿದೆ ಎಂಬ ಕಾರಣಕ್ಕೆ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದೆವು. ಸಮುದ್ರ ಸ್ನಾನ ಮಾಡಬೇಕು ಎಂಬ ಆಸೆ ಮಕ್ಕಳು ಸೇರಿದಂತೆ ನಮಗೆಲ್ಲ ಇತ್ತು. ಸಮುದ್ರ ಬಿರುಸಾಗಿರುವುದು ನಮಗೆ ಅರಿವಿಗೆ ಬರಲಿಲ್ಲ’ ಎಂದು ಬೆಳಗಾವಿ ಜಿಲ್ಲೆ ಗೋಕಾಕದಿಂದ ಪ್ರವಾಸಕ್ಕೆ ಬಂದಿದ್ದ ನದೀಮ್ ಇಕ್ಬಾಲ್ ಹೇಳಿದರು.

‘ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಅರಿವಿಗಿದ್ದರೂ ಪ್ರವಾಸಿಗರು ಮೋಜಿಗಾಗಿ ನೀರಿಗೆ ಇಳಿಯುವ ಪ್ರಯತ್ನ ಮಾಡುತ್ತಾರೆ. ಎಚ್ಚರಿಕೆ ನೀಡಲು ಹೋದರೆ ನಮ್ಮ ಮೇಲೆ ಗದರುತ್ತಾರೆ. ಆದರೂ ಅವರ ಜೀವ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಪ್ರವಾಸಿಗರಿಗೆ ಸಾಧ್ಯವಾದಷ್ಟು ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ’ ಎಂದು ಜೀವರಕ್ಷಕ ಸಿಬ್ಬಂದಿಯೊಬ್ಬರು ಹೇಳಿದರು.

ಎಚ್ಚರಿಕೆ ಫಲಕ ಅಳವಡಿಕೆ: ಪ್ರವಾಸಿಗರು, ಸಾರ್ವಜನಿಕರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಸುವ ಸಲುವಾಗಿ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಶನಿವಾರ ಎಚ್ಚರಿಕೆ ಫಲಕ ಅಳವಡಿಸಲಾಯಿತು.

‘ಜೂನ್‍ನಿಂದ ಆಗಸ್ಟ್ ವರೆಗೆ ಕಡಲತೀರಕ್ಕೆ ತೆರಳಬಾರದು. ಸಮುದ್ರಕ್ಕೆ ಇಳಿಯಬಾರದು’ ಎಂಬ ಎಚ್ಚರಿಕೆ ಸಂದೇಶವಿರುವ ಫಲಕವನ್ನು ಜೀವರಕ್ಷಕ ಸಿಬ್ಬಂದಿ ಅಳವಡಿಸಿದರು.

ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸುವ ಫಲಕ ಅಳವಡಿಸಲಾಗಿದೆ

ಕಡಲು ಕೊರೆತದ ಆತಂಕ ಮುಂಗಾರು ಆರಂಭಕ್ಕೆ ಮುನ್ನವೇ ಎದುರಾಗಿರುವ ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಕಡಲತೀರದಲ್ಲಿ ಬಹಳಷ್ಟು ದೂರದವರೆಗೆ ಅಪ್ಪಳಿಸಲಾರಂಭಿಸಿವೆ. ಟ್ಯಾಗೋರ್ ಕಡಲತೀರ ಗೋಕರ್ಣ ದೇವಭಾಗ ಅಂಕೋಲಾದ ಬೆಳಂಬಾರ ಸೇರಿದಂತೆ ವಿವಿಧೆಡೆ ಕಡಲು ಕೊರೆತದ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.