
ಶಿರಸಿ: ‘ಮಕ್ಕಳಿಗೆ ಸಹಕಾರ ವ್ಯವಸ್ಥೆಯ ಕುರಿತು ತಿಳಿವಳಿಕೆ ನೀಡುವ ಅವಶ್ಯಕತೆ ಇದ್ದು, ಶಾಲಾ ಪಠ್ಯಕ್ರಮದಲ್ಲಿ ಸಹಕಾರ ವಿಷಯದ ಬಗ್ಗೆ ಒಂದು ಪಾಠ ಸೇರ್ಪಡೆ ಮಾಡಬೇಕಿದೆ’ ಎಂದು ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಟಿ ಹೆಗಡೆ ತಟ್ಟಿಸರ ಹೇಳಿದರು.
ನಗರದ ಟಿ.ಆರ್.ಸಿ. ಸಭಾಂಗಣದಲ್ಲಿ ಸಹಕಾರ ಮಹಾಮಂಡಳ, ಸಹಕಾರ ಯೂನಿಯನ್ ಕುಮಟಾ, ಕೆಡಿಸಿಸಿ ಬ್ಯಾಂಕ್, ಸಹಕಾರ ಇಲಾಖೆ, ಟಿಆರ್‌ಸಿ ಹಾಗೂ ಶಿರಸಿ ತಾಲ್ಲೂಕಿನ ಸಹಕಾರ ಸಂಘಗಳ ವತಿಯಿಂದ ಶನಿವಾರ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಸಹಕಾರ ಸಂಘಗಳ ಕಾಯಿದೆ, ವ್ಯವಹಾರಗಳ ತಿಳಿವಳಿಕೆ ಎಷ್ಟಿದೆ ಎಂಬುದು ಗಮನಾರ್ಹ. ಆದರೆ ಸಹಕಾರಿ ಆಂದೊಲನ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದು ಯುವ ಪೀಳಿಗೆಗೆ ತಿಳಿದಿಲ್ಲ. ಪಠ್ಯಪುಸ್ತಕಗಳಲ್ಲಿ ಸಹಕಾರ ವ್ಯವಸ್ಥೆಯ ಕುರಿತು ಪಾಠಗಳು ಬರುವವರೆಗೂ ಜನರಿಗೆ ಸಹಕಾರ ತತ್ವಗಳನ್ನು ತಿಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ದಿಸೆಯಿಂದಲೇ ಸಹಕಾರ ತತ್ವಗಳ ಮನವರಿಕೆ ಆಗಬೇಕು’ ಎಂದರು.
ಧಾರವಾಡ ಹಾಲು ಒಕ್ಕೂಟದ ಪ್ರಭಾರಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ‘ಸಹಕಾರ ವ್ಯವಸ್ಥೆಯಲ್ಲಿ ಲಾಭಕ್ಕಾಗಿ ಸಂಸ್ಥೆಗಳಿಲ್ಲ ಬದಲಾಗಿ ಸೇವೆಗಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಹಕಾರಿಗಳ ಬಗ್ಗೆ ರಾಜ್ಯದಲ್ಲಿ ಉತ್ತಮ ಹೆಸರಿದೆ. ಸಂಘರ್ಷದ ನಡುವೆ ಸಹಕಾರ ವ್ಯವಸ್ಥೆ ಹೋಗುತ್ತಿದೆ. ರಾಜಕಾರಣದ ಹಸ್ತಕ್ಷೇಪ ಸಹಕಾರ ವ್ಯವಸ್ಥೆಯ ದಿಕ್ಕು ತಪ್ಪಿಸುತ್ತಿದೆ. ಹಿರಿಯರ ಭಾವನೆಗಳಿಗೆ ಸ್ಪಂದಿಸಿ ಸಹಕಾರ ವ್ಯವಸ್ಥೆಯನ್ನು ಮುನ್ನೆಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ‘ಸಹಕಾರ ಕ್ಷೇತ್ರ ಯಾರ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ’ ಎಂದರು.
ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಟಿಆರ್ಸಿ ಉಪಾಧ್ಯಕ್ಷ ವಿಶ್ವಾಸ ಬಲ್ಸೆ, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ ಮಾತನಾಡಿದರು. ಕದಂಬ ಮಾರ್ಕೆಟಿಂಗ್ ಸಹಕಾರ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ ಇದ್ದರು. ಯೂನಿಯನ್ ಉಪಾಧ್ಯಕ್ಷ ಶ್ರೀಪಾದ ರಾಯ್ಸದ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ ಉಪನ್ಯಾಸ ನೀಡಿದರು. ಯೂನಿಯನ್ ನಿರ್ದೇಶಕ ಮಹೇಂದ್ರ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ.ಹೆಗಡೆ ನಿರ್ವಹಿಸಿದರು.
ಅತಿಯಾದ ರಾಜಕೀಯ ಹಸ್ತಕ್ಷೇಪ ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿದೆ. ರಾಜಕೀಯ ಹಿತದೃಷ್ಟಿ ಅಥವಾ ಸ್ವ ಹಿತದೃಷ್ಟಿಯಿಂದ ಸಹಕಾರ ಕ್ಷೇತ್ರಕ್ಕೆ ಬರುವವರೇ ಹೆಚ್ಚಾಗುತ್ತಿದ್ದಾರೆಅಜಿತ ಶಿರಹಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಬಸವೇಶ್ವರ ಸಹಕಾರ ಸೇವಾ ಸಂಘಕ್ಕೆ ಉತ್ತಮ ಸಹಕಾರ ಪ್ರಶಸ್ತಿಯನ್ನು ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ ಅವರಿಗೆ ಉತ್ತಮ ಸಹಕಾರ ನೌಕರ ಪ್ರಶಸ್ತಿಯನ್ನು ಎಸ್.ಎನ್.ಹೆಗಡೆ ದೊಡ್ನಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು. ಎನ್.ಪಿ.ಗಾಂವಕರ ದತ್ತಿನಿಧಿ ಪ್ರಶಸ್ತಿಯನ್ನು ಹುಳಗೋಳ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಎಂ.ಹೆಗಡೆ ಮಾತ್ನಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.