ಶಿರಸಿ: ಭತ್ತದ ಹುಲ್ಲಿನ ಧಾರಣೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಜೋಳದ ಕಣಕಿ (ದಂಟು) ಭಾರಿ ಬೇಡಿಕೆ ವ್ಯಕ್ತವಾಗಿದೆ. ರೈತರು ಭತ್ತದ ಹುಲ್ಲಿಗೆ ಪರ್ಯಾಯವಾಗಿ ಜಾನುವಾರುಗಳಿಗೆ ವಿವಿಧ ಭಾಗಗಳಿಂದ ಜೋಳದ ಕಣಕಿಯನ್ನು ತರಿಸಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯ ಪರಿಣಾಮ ಭತ್ತದ ಬೆಳೆ ಬಹುತೇಕ ನಾಶವಾಗಿತ್ತು. ಇದರಿಂದ ಇರುವ ಭತ್ತದ ಹುಲ್ಲಿಗೆ ಸಾಕಷ್ಟು ದರ ಹೆಚ್ಚಿದೆ. ಒಂದು ಲೋಡ್ ಭತ್ತದ ಹುಲ್ಲಿಗೆ ₹15–₹17 ಸಾವಿರ ದರವಿದೆ. ಪ್ರಸ್ತುತ ಜೋಳದ ಕಣಕಿಯ ಬೆಲೆ ಟ್ರ್ಯಾಕ್ಟರ್ ಒಂದಕ್ಕೆ ಅಂದಾಜು ₹10–₹12 ಸಾವಿರ. ಭತ್ತದ ಹುಲ್ಲಿನ ದರಕ್ಕಿಂತ ಸಾಕಷ್ಟು ಕಡಿಮೆಗೆ ಲಭ್ಯವಾಗುತ್ತಿದೆ. ಹೀಗಾಗಿ ಜಾನುವಾರುಗಳ ಮೇವಿಗಾಗಿ ರೈತರು ಹೊರ ಜಿಲ್ಲೆಗಳಿಂದ ಜೋಳದ ಕಣಕಿಯನ್ನು ತರುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕ್ಷೇತ್ರ ವಿಸ್ತರಣೆಯ ಕಾರಣಕ್ಕೆ ತಾಲ್ಲೂಕಿನ ವ್ಯಾಪ್ತಿಯ ಅನೇಕ ರೈತರು ತಮ್ಮ ಜಮೀನುಗಳಲ್ಲಿ ಅಡಿಕೆಗೆ ಆಶ್ರಯ ನೀಡಿದ್ದಾರೆ. ಇದರಿಂದ ಜೋಳದ ಕ್ಷೇತ್ರ ಕುಂಠಿತವಾಗಿದೆ. ಇನ್ನೂ ಕೆಲ ರೈತರು ಜಮೀನುಗಳನ್ನು ಶುಂಠಿ, ಅನಾನಸ್ ಗದ್ದೆಗಳನ್ನಾಗಿ ಪರಿವರ್ತಿಸಿದ್ದಾರೆ. ಇದರಿಂದಾಗಿ ಜೋಳದ ಬಿತ್ತನೆ ಕಡಿಮೆಯಾಗಿದೆ. ಕಳೆದ ಸಾಲಿನಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳವನ್ನು ಬಿತ್ತನೆ ಮಾಡಿದ್ದಾರೆ' ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.
'ವರ್ಷಪೂರ್ತಿ ಜಾನುವಾರುಗಳಿಗೆ ಒಣ ಮೇವು ಬೇಕು. ಅದರಲ್ಲಿ ಬೇಸಿಗೆ ಹಾಗೂ ಚಳಿಗಾಲದಲ್ಲಿ ಮೇವಿನ ಕೊರತೆ ಆಗಬಾರದು ಎಂದು ಇಷ್ಟು ವರ್ಷ ಭತ್ತದ ಹುಲ್ಲಿನ ಮೊರೆ ಹೋಗುತ್ತಿದ್ದ ರೈತರು ಈ ವರ್ಷ ಜೋಳದ ಕಣಕಿಯನ್ನು ಖರೀದಿಸುತ್ತಾರೆ. ಹೀಗೆ ಖರೀದಿಸಿ ತಂದ ಜೋಳದ ಕಣಕಿಯನ್ನು ತಮ್ಮ ಜಮೀನು ಇಲ್ಲವೇ ತಮ್ಮ ಕೊಟ್ಟಿಗೆ ಅಟ್ಟದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಜೋಳದ ಕಣಕಿ ಹಾಕುವುದರಿಂದ ಹಾಲಿನ ಗುಣಮಟ್ಟವೂ ಹೆಚ್ಚುತ್ತದೆ' ಎನ್ನುತ್ತಾರೆ ಕೃಷಿಕ ಕೇಶವ ನಾಯ್ಕ ಅವರು.
'ಜಾನುವಾರುಗಳಿಗೆ ಪ್ರತಿದಿನ ಹಸಿ ಮೇವು ಹಾಕುವುದರಿಂದ ಜಾನುವಾರುಗಳಿಗೆ ಬೇಧಿಯಾಗಿ ನಿಶಕ್ತಿಯನ್ನು ಹೊಂದುತ್ತವೆ. ಹಾಗೆಯೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅದಕ್ಕಾಗಿ ರೈತರು ತಮ್ಮ ಜಾನುವಾರುಗಳಿಗೆ ಒಣ ಮೇವನ್ನು ಹಾಕುತ್ತಾರೆ. ಜಾನುವಾರುಗಳ ಆರೋಗ್ಯದ ಹಿತ ದೃಷ್ಟಿಯಿಂದ ಒಣಮೇವು ಕೊಡುವುದು ಅನಿವಾರ್ಯ. ಭತ್ತದ ಹುಲ್ಲಿನ ದರ ಹೆಚ್ಚಿರುವ ಕಾರಣಕ್ಕೆ ಜೋಳದ ಕಣಕಿಯನ್ನು ಖರೀದಿಸುವುದು ಅನಿವಾರ್ಯವಾಗಿದೆ. ಸರ್ಕಾರದ ವತಿಯಿಂದ ಮೇವು ಬ್ಯಾಂಕ್ ಸ್ಥಾಪಿಸಲು ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.
ಟ್ರ್ಯಾಕ್ಟರ್ ಭತ್ತದ ಹುಲ್ಲಿಗೆ ₹15ರಿಂದ ₹17 ಸಾವಿರ ಟ್ರ್ಯಾಕ್ಟರ್ ಜೋಳದ ಕಣಕಿ ₹10ರಿಂದ ₹12 ಸಾವಿರ ಜೋಳದ ಕಣಕಿಯಿಂದ ಗುಣಮಟ್ಟದ ಹಾಲು
ಬಿಸಿಲು ಹೆಚ್ಚಿರುವ ಕಾರಣ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಸಾಕುವುದು ಅನಿವಾರ್ಯ. ಬೇಸಿಗೆಯಲ್ಲಿ ಹಸಿಮೇಲಿನ ಲಭ್ಯತೆಯೂ ಕಡಿಮೆ. ಹೀಗಾಗಿ ಕಡಿಮೆ ದರಕ್ಕೆ ಸಿಗುವ ಜೋಳದ ಕಣಕಿಗೆ ಮೊರೆ ಹೋಗಲಾಗಿದೆರಾಮಕೃಷ್ಣ ಭಟ್ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.