ADVERTISEMENT

ಕೋವಿಡ್ ಗೆದ್ದವರ ಕಥೆಗಳು | ಬದುಕುವ ಆತ್ಮವಿಶ್ವಾಸ ಇರಬೇಕು: ಜ್ಯೋತಿ ತಲ್ಲೂರ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 19:30 IST
Last Updated 27 ಜುಲೈ 2020, 19:30 IST
ಜ್ಯೋತಿ ತಲ್ಲೂರ್
ಜ್ಯೋತಿ ತಲ್ಲೂರ್   

ಮುಂಡಗೋಡ: ‘ಬೆಳಿಗ್ಗೆ 10ಕ್ಕೆ ನ್ಯಾಯಾಲಯಕ್ಕೆ ಹೋಗಲು ತಯಾರಾಗುತ್ತಿದ್ದೆ. ಅಷ್ಟರಲ್ಲಿ ತಹಶೀಲ್ದಾರ್ ಅವರ ಕರೆ ಬಂತು. ನಿಮ್ಮದು ಹಾಗೂ ದೊಡ್ಡ ಮಗನ ವರದಿ ಪಾಸಿಟಿವ್ ಬಂದಿದೆ. ಇಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕು ಎಂದರು. ಇದನ್ನು ಕೇಳಿ ಒಂದು ಕಡೆ ಆತಂಕ ಉಂಟಾಯಿತು. ಮತ್ತೊಂದೆಡೆ ಇಷ್ಟೆಲ್ಲ ಮುಂಜಾಗ್ರತೆ ಕೈಗೊಂಡರೂ ಪಾಸಿಟಿವ್ ಬಂತಲ್ಲ ಎಂದು ಬೇಜಾರಾಯಿತು. ಅನಿವಾರ್ಯವಾಗಿ ದೊಡ್ಡ ಮಗನನ್ನು ಕರೆದುಕೊಂಡು ಕೋವಿಡ್ ಕೇಂದ್ರಕ್ಕೆ ಹೋಗಲು ಅಣಿಯಾದೆ...’

ಕೋವಿಡ್ 19 ಖಚಿತಗೊಂಡು ಎಂಟು ದಿನಗಳಲ್ಲಿ ಗುಣಮುಖರಾಗಿ ಬಂದಿರುವ ಪಟ್ಟಣದ ವಕೀಲೆ ಜ್ಯೋತಿ ತಲ್ಲೂರ್ ತಮ್ಮ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ವ್ಯಕ್ತಿಯೊಬ್ಬರು ಆದಾಯ ತೆರಿಗೆ ಮಾಹಿತಿ ತುಂಬಲು ಕಚೇರಿಗೆ ಬಂದು ಹೋಗಿದ್ದರು. ಎರಡು ದಿನಗಳಲ್ಲಿ ಅವರಿಗೆ ಕೋವಿಡ್ ಪಾಸಿಟಿವ್ ಅಂತ ವರದಿ ಬಂದಿತ್ತು. ನೇರವಾಗಿ ಆತನ ಸಂಪರ್ಕಕ್ಕೆ ನಾನು ಬಂದಿರಲಿಲ್ಲ. ಆದರೆ, ಆ ವ್ಯಕ್ತಿ ನನ್ನ ದೊಡ್ಡ ಮಗನ ಹತ್ತಿರ ದುಡ್ಡು, ಕಾಗದಪತ್ರ ನೀಡಿದ್ದರು. ಆದರೂ ಅನುಮಾನ ಬೇಡ ಎಂದು ನಾನು ಹಾಗೂ ಇಬ್ಬರೂ ಮಕ್ಕಳು ಗಂಟಲು ದ್ರವ ಪರೀಕ್ಷೆಗೆ ನೀಡಿದ್ದೆವು. ವರದಿ ಬರುವರೆಗೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೆವು. ಐದನೇ ದಿನಕ್ಕೆ ದೊಡ್ಡ ಮಗ ಹಾಗೂ ನನ್ನದು ಪಾಸಿಟಿವ್, ಚಿಕ್ಕ ಮಗನ ವರದಿ ನೆಗೆಟಿವ್ ಬಂದಿತ್ತು.’

ADVERTISEMENT

‘ಕೋವಿಡ್ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣಬಾರದು. ಇದು ಜೀವ ಹೋಗುವಂತಹ ಕಾಯಿಲೆ ಅಲ್ಲ. ಸೋಂಕು ತಗುಲಿದರೆ ಧೈರ್ಯವೇ ಮುಖ್ಯ. ಆತ್ಮಬಲದ ಜೊತೆಗೆ ನಾನು ಬದುಕಿ ಬರುತ್ತೇನೆ ಎಂಬ ದೃಢವಿಶ್ವಾಸ ಇರಬೇಕು. ಒಂದು ದಿನ ಮಾತ್ರ ನನಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ಅದರ ಹೊರತಾಗಿ ಬೇರೆ ಯಾವುದೇ ಲಕ್ಷಣ, ನೋವು ಇರಲಿಲ್ಲ. ಸೋಂಕಿನ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡಬಾರದು.’

‘ಕೋವಿಡ್ ಕೇರ್ ಸೆಂಟರ್‌ನಲ್ಲಿ ಝಿಂಕ್ ಸಲ್ಫೇಟ್, ಪ್ಯಾರಾಸಿಟಮೋಲ್, ಅಜಿಟ್ರೋಮೈಸಿನ್, ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮಾತ್ರೆಗಳನ್ನು ನೀಡುತ್ತಿದ್ದರು. ಉತ್ತಮವಾದ ಊಟ, ಬಾದಾಮಿ ಹಾಲು, ಬಿಸ್ಕತ್ ನೀಡುತ್ತಿದ್ದರು. ತಹಶೀಲ್ದಾರ್ ಶ್ರೀಧರ ಮುಂದಲಮನಿ, ಡಾ.ಎಚ್.ಎಫ್.ಇಂಗಳೆ ಪ್ರತಿದಿನ ಕರೆ ಮಾಡಿ ಆರೋಗ್ಯದ ಬಗ್ಗೆ ಹಾಗೂ ಏನಾದರೂ ಸಮಸ್ಯೆ ಇದೆಯೇ ಎಂದು ವಿಚಾರಿಸುತ್ತಿದ್ದರು.’

‘ಪಾಸಿಟಿವ್ ದೃಢಗೊಂಡಾಗ ಸರಿಯಾಗಿ ಪ್ರಯಾಣದ ವಿವರನ್ನು ನೀಡಬೇಕು. ಬೇಜವಾಬ್ದಾರಿ ತೋರಬಾರದು. ಇದರಿಂದ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ, ನಿಯಂತ್ರಿಸಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ.’

– ನಿರೂಪಣೆ: ಶಾಂತೇಶ ಬೆನಕನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.