ಕಾರವಾರ: ಅತಿಯಾದ ಮಳೆ, ಆಗಾಗ ಕಾಣಿಸಿಕೊಂಡ ಬಿಸಿಲಿನ ವಾತಾವರಣದಿಂದ ಕೃಷಿ, ತೋಟಗಾರಿಕೆ ಕ್ಷೇತ್ರ ನಲುಗಿದೆ. ಬೆಳೆಗಳಿಗೆ ಕೊಳೆರೋಗ ಬಾಧೆ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಸುಮಾರು 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 8 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಅತಿಯಾದ ಮಳೆಯಿಂದಾಗಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ನಿರ್ವಹಣೆ ಮಾಡಿದ್ದರೂ ಮಳೆ–ಬಿಸಿಲಿನ ವಾತಾವರಣದಿಂದ ಕೊಳೆರೋಗ ಬಾಧಿಸಿ ಅಡಿಕೆ ಮಿಳ್ಳೆಗಳು ಉದುರುತ್ತಿವೆ. ಇದರಿಂದ ಲಕ್ಷಾಂತರ ಮೌಲ್ಯದ ಫಸಲು ಮಣ್ಣುಪಾಲಾಗುತ್ತಿದೆ ಎಂಬುದು ರೈತರ ದೂರು.
‘ಕಳೆದುಕೊಂಡ ಬೆಳೆಗೆ ಪರಿಹಾರವೂ ಇಲ್ಲ. ಕೊಳೆರೋಗ ನೈಸರ್ಗಿಕವಾಗಿದ್ದರೂ ಅದನ್ನು ಸರ್ಕಾರ ಪರಿಹಾರಕ್ಕೆ ಪರಿಗಣಿಸುತ್ತಿಲ್ಲ. ಶೇ 33ಕ್ಕಿಂತ ಹೆಚ್ಚು ಪ್ರಮಾಣದ ನಷ್ಟವಾದರೆ ಮಾತ್ರ ಹಾನಿ ಎಂದು ಪರಿಗಣಿಸುತ್ತಾರೆ. ಅಷ್ಟು ನಷ್ಟವಾದರೂ ಪರಿಹಾರ ನೀಡುವುದಿಲ್ಲ’ ಎಂದು ರೈತ ವಿ.ಆರ್.ಹೆಗಡೆ ದೂರುತ್ತಾರೆ.
ಶಿರಸಿ ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗದ ಜತೆ ಮಂಗಗಳ ಹಾವಳಿ ಮಿತಿ ಮೀರಿದೆ. ನೆಗ್ಗು, ನೇರ್ಲವಳ್ಳಿ, ಹುಲೇಕಲ್, ವಾನಳ್ಳಿ, ಬಂಡಲ, ಮಂಜುಗುಣಿ, ಭೈರುಂಬೆ ಸೇರಿ ಅರಣ್ಯದೊಳಗಿನ ಗ್ರಾಮಗಳಲ್ಲಿ ಅಡಿಕೆ ತೋಟಕ್ಕೆ ಮಂಗಗಳ ಹಾವಳಿ ಹೆಚ್ಚಿದೆ.
‘ಮಂಗಗಳ ಹಾವಳಿಯಿಂದ ಉಂಟಾದ ಹಾನಿಗೆ ಅರಣ್ಯ ಇಲಾಖೆಯಲ್ಲಿ ಪರಿಹಾರ ನೀಡಲು ಅವಕಾಶವಿಲ್ಲ. ಆದರೆ ಪ್ರತಿ ವರ್ಷ ಈ ಸಮಸ್ಯೆಯಿಂದ ಶೇ 20ರಷ್ಟು ಅಡಿಕೆ ಬೆಳೆ ನಷ್ಟ ಆಗುತ್ತಿದೆ. ಮಂಗಗಳ ಹಾವಳಿಯಿಂದಾದ ನಷ್ಟಕ್ಕೂ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಅಡಿಕೆ ಬೆಳೆಗಾರ ಚಂದ್ರಶೇಖರ ಹೆಗಡೆ.
ಜೊಯಿಡಾ ತಾಲ್ಲೂಕಿನಲ್ಲಿ ಅತಿಯಾಗಿ ಸುರಿದ ಮಳೆ ಮತ್ತು ಕೆಲವು ದಿನಗಳಲ್ಲಿ ಇದ್ದ ಬಿಸಿಲ ವಾತಾವರಣದಿಂದಾಗಿ ಅಡಿಕೆಗೆ ಕೊಳೆರೋಗ ಬಾಧಿಸಿದೆ. ನಂದಿಗದ್ದೆ ಗ್ರಾಮ ಪಂಚಾಯಿತಿಯ ಬಹುತೇಕ ಎಲ್ಲ ಭಾಗಗಳಲ್ಲಿ, ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ, ಚಂದ್ರಾಳಿ, ಪ್ರಧಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಣಸೋಲಿ, ಜೊಯಿಡಾದ ಉಡಸಾ, ನಗರಿ ಭಾಗಗಳಲ್ಲಿ ಅಧಿಕ ಸಂಖ್ಯೆಯಲ್ಲಿ ರೈತರು ಅಡಿಕೆಯನ್ನು ಬೆಳೆಯುತ್ತಿದ್ದು ಇದು ಈ ಭಾಗದ ಜನರ ಆದಾಯದ ಏಕ ಮಾತ್ರ ಮೂಲವಾಗಿದೆ.
ಅಂಕೋಲಾ ತಾಲ್ಲೂಕಿನ ಮೊಗಟಾ, ಮೊರಳ್ಳಿ, ಮಾಣಿಕಾರ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ತೋಟಕ್ಕೆ ರಕ್ಷಣೆಗೆ ಹಾಕಲಾಗಿದ್ದ ಬೇಲಿಗಳನ್ನು ಮುರಿದು ತೋಟಕ್ಕೆ ನುಗ್ಗಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನು ಹಾಳುಮಾಡುತ್ತಿವೆ ಎಂಬುದು ರೈತರ ದೂರು.
ಹಳಿಯಾಳ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಾಡಿತ್ತು. ಸದ್ಯ ರೋಗಬಾಧೆ ನಿಂತಿದೆ. ತೀವ್ರ ಮಳೆಯಾದರೆ ಮೆಕ್ಕೆಜೋಳಕ್ಕೆ ತೇವಾಂಶ ಹೆಚ್ಚುತ್ತದೆ. ಮಳೆ ಕಡಿಮೆಯಾಗಿ ಬಿಸಿಲು ಬಹಳವಾದರೆ ತೆನೆ ತುಂಬದೆ ಕಾಳು ಸಣ್ಣದಾಗಿ ಬೆಳೆಯುತ್ತದೆ. ಬಹಳ ಬಿಸಿಲು ಇರಬಾರದು, ಬಹಳ ಮಳೆಯೂ ಇರಬಾರದು ಆಗ ಮಾತ್ರ ಬೆಳೆ ಚೆನ್ನಾಗಿ ಬರುತ್ತದೆ. ಗದ್ದೆಯಲ್ಲಿ ಕಾಡು ಹಂದಿ ಹಾಗೂ ನರಿಗಳು ಸಹ ನುಗ್ಗಿ ತೆನೆಗಳನ್ನು ತಿಂದು ಬೆಳೆ ನಾಶ ಮಾಡುತ್ತಿವೆ ಎಂದು ತೇರಗಾಂವ ಗ್ರಾಮದ ರೈತ ಅಶೋಕ ಯಲ್ಲಪ್ಪ ಮಿರಾಶಿ ಅಳಲು ತೋಡಿಕೊಂಡರು.
ಕುಮಟಾ ನಿರಂತರ ಮಳೆ ಒಂದೇ ಸಮನೆ ಕಡಿಮೆಯಾಗಿರುವುದು ಭತ್ತ ಹಾಗೂ ಮಳೆಗಾಲದ ತರಕಾರಿ ಬೆಳೆಗೆ ಹಾನಿಯಾಗಿದೆ. ಒಂದು ವಾರದ ಬಿಸಿಲಿನಿಂದಾಗಿ ಭತ್ತದ ಬೆಳೆಗೆ ಎರೆ ರೋಗ ಬಿದ್ದಿದೆ. ಸೌತೆ, ಹೀರೆ, ಹಾಗಲಕಾಯಿ ಮುಂತಾದ ತರಕಾರಿ ಬೆಲೆ ಬಿಸಿಲಿಗೆ ಸುಟ್ಟು ಹೋಗುತ್ತಿದೆ ಎಂದು ತಂಡ್ರಕುಳಿ ಗ್ರಾಮದ ರೈತ ಬೀರಗೌಡ ತಿಳಿಸಿದರು.
ಹೊನ್ನಾವರ ತಾಲ್ಲೂಕಿನ ಹಲವೆಡೆ ಅರಣ್ಯ ಪ್ರದೇಶಗಳು ಒತ್ತುವರಿಯಾಗಿ ಅಲ್ಲಿಯೂ ಅಡಿಕೆ-ತೆಂಗಿನ ತೋಟಗಳು ನಿರ್ಮಾಣವಾಗಿವೆ. ಇದರಿಂದ ತೋಟದ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು ರೈತರು ಹೈರಾಣಾಗಿದ್ದಾರೆ. ಕೆಂಪು ಮೂತಿಯ ಬಿಳಿ ಮಂಗಗಳು ಎಲೆ ಅಡಿಕೆ, ತೆಂಗಿನ ಕಾಯಿಗಳನ್ನು ತಿಂದು ಹಾಕುತ್ತಿದ್ದರೆ ರಾತ್ರಿ ತೋಟಗಳಿಗೆ ನುಗ್ಗುವ ಕಾಡು ಹಂದಿಗಳು ಅಡಿಕೆ ಗಿಡಗಳನ್ನು ಧ್ವಂಸಗೊಳಿಸುತ್ತಿವೆ.
‘ತೋಟದ ಸುತ್ತ ಐಬೆಕ್ಸ್ ಬೇಲಿ ಹಾಕಿದ್ದರೂ ಕಾಡು ಹಂದಿಗಳ ಕಾಟ ತಪ್ಪಿಸಲಾಗುತ್ತಿಲ್ಲ. ಸರಿಸುಮಾರು ನೂರು ತೆಂಗಿನ ಮರಗಳಿದ್ದರೂ ದಿನಬಳಕೆಗೆ ನಾವೇ ತೆಂಗಿನ ಕಾಯಿ ಖರೀದಿಸಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಗುಂಡಿಬೈಲ್‍ನ ವಿನಾಯಕ ಭಟ್ ಅಳಲು ತೋಡಿಕೊಂಡರು.
ಅತಿವೃಷ್ಟಿಯಿಂದ ತೋಟಕ್ಕೆ ಹಾನಿಯಾದರೆ ಮಾತ್ರ ಪರಿಹಾರವಿದೆ. ಅಡಿಕೆ ಕೊಳೆರೋಗಕ್ಕೆ ಪರಿಹಾರ ನೀಡಲು ಅವಕಾಶ ಇಲ್ಲಬಿ.ಪಿ.ಸತೀಶ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಅಡಿಕೆ ತೋಟದಲ್ಲಿ ಕೆಲಸಗಾರರು ಸಿಗದೇ ಅಡಿಕೆ ತೋಟ ನಿರ್ವಹಣೆ ಕಷ್ಟ ಜೊತೆಗೆ ದುಬಾರಿಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಕೊಳೆ ರೋಗದಿಂದ ಮತ್ತೆ ಹಾನಿಯಾಗಿದೆರಾಮಚಂದ್ರ ದೇಸಾಯಿ ಶೇವಾಳಿ ರೈತ
ಕಾಡುಪ್ರಾಣಿಗಳ ದಾಳಿಯಿಂದ ಬೆಳೆಹಾನಿಯಾದ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೆ ಅಲ್ಪ ಪರಿಹಾರ ನೀಡುವ ಭರವಸೆ ನೀಡುತ್ತಾರೆ ಅದು ನಮಗೆ ತಲುಪಲು ವರ್ಷವಿಡೀ ಕಾಯಬೇಕುಗೋವಿಂದ ನಾಯಕ ಭಾವಿಕೇರಿ ರೈತ
ಔಷಧ ಸಿಂಪಡಣೆಗೆ ಅಡ್ಡಿ:
ಯಲ್ಲಾಪುರ ತಾಲ್ಲೂಕಿನಲ್ಲಿ ಆರಂಭದಲ್ಲಿ ಬಿಟ್ಟುಬಿಡದೆ ಮಳೆಯಾದ ಕಾರಣ ಅಡಿಕೆಗೆ ಕೊಳೆ ಔಷಧ ಸಿಂಪಡಿಸಲು ಬಹಳೇ ಜನರಿಗೆ ಸಾಧ್ಯವಾಗಲಿಲ್ಲ. ಈಗ ಮಳೆ ಬಿಸಿಲು ವಾತಾವರಣ ಇದೆ ಹಾಗಾಗಿ ತಾಲ್ಲೂಕಿನ ಬಹಳಷ್ಟು ಕಡೆ ಅಡಿಕೆಗೆ ಕೊಳೆ ರೋಗ ಕಂಡುಬಂದಿದೆ. ವಜ್ರಳ್ಳಿ ಬೀಗಾರ ಬಾಗಿನಕಟ್ಟಾ ಮೊದಲಾದೆಡೆ ತೆಂಗಿನ ಮಿಳ್ಳೆಗಳನ್ನು ಮಂಗಗಳು ತಿನ್ನುತ್ತಿದ್ದು ಈಚೆಗೆ ತೆಂಗಿನ ಇಳುವರಿಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ‘ಪ್ರತಿವರ್ಷ ಜೂನ್ ಮೊದಲ ವಾರದಲ್ಲಿ ಅಡಿಕೆಗೆ ಕೊಳೆ ಔಷಧ ಹೊಡೆಯುತ್ತಿದ್ದೆ. ಈ ಸಲ ಮಳೆ ಬಿಡುವು ನೀಡದ ಕಾರಣ ಔಷಧ ಸಿಂಪಡಣೆ ತಡವಾಗಿದೆ. ತೋಟದಲ್ಲಿ ಅಲ್ಲಲ್ಲಿ ಕೊಳೆ ಕಂಡು ಬಂದಿದೆ. ಹೀಗೆ ಬಿಸಿಲು ಮಳೆ ಮುಂದುವರಿದರೆ ಕೊಳೆ ಹೆಚ್ಚಬಹುದು’ ಎಂದು ರೈತ ಸದಾನಂದ ಭಟ್ಟ ಹೇಳಿದರು.
ಜೋಳ ಬಿಟ್ಟು ಭತ್ತ ಬೆಳೆದ ರೈತ:
ಮುಂಡಗೋಡ ತಾಲ್ಲೂಕಿನಲ್ಲಿ ಪ್ರಸಕ್ತ ಮಳೆಗಾಲ ಗೋವಿನಜೋಳ ಬೆಳೆಗಾರರಿಗೆ ಬರೆ ಎಳೆದಿದೆ. ಬಿಡುವು ನೀಡದೇ ಸುರಿದ ಮಳೆಯಿಂದ ಬಿತ್ತಿದ ಬೀಜಗಳು ತೇಲಿ ಹೋದರೆ ಮತ್ತೆ ಕೆಲವು ಹುಟ್ಟಿದರೂ ಬೆಳವಣಿಗೆ ಕಾಣದೇ ಮಣ್ಣಲ್ಲಿ ಮುಚ್ಚಿದವು. ಭತ್ತ ಬಿತ್ತಲೂ ಸಹ ಹಲವು ರೈತರಿಗೆ ಸಾಧ್ಯವಾಗದೇ ನಾಟಿ ಮಾಡುವ ಅನಿವಾರ್ಯತೆ ಒದಗಿಬಂದಿದೆ. ಅತಿಯಾದ ಮಳೆಯಿಂದ ಮಳಗಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಅಡಿಕೆ ನೆಲಕ್ಕೆ ಉದುರಿ ಹಾನಿಯಾಗಿದೆ. ‘ಮೂರು ಎಕರೆಯಲ್ಲಿ ಗೋವಿನಜೋಳ ಹಾಕಿದ್ದೆ. ಆರಂಭದಲ್ಲಿ ಮಳೆ ಕೊರತೆಯಂತೆ ಕಂಡುಬಂದಿತು. ನಂತರ ಆರಂಭಗೊಂಡ ಮಳೆ ನಿರಂತರವಾಗಿ ಸುರಿಯಿತು. ಇದರಿಂದ ಗೋವಿನಜೋಳದ ಬೆಳವಣಿಗೆ ಕುಂಠಿತಗೊಂಡು ಬೆಳೆ ಹಾಳಾಯಿತು. ಅನಿವಾರ್ಯವಾಗಿ ನೆಲಸಮ ಮಾಡಿ ಪುನಃ ಭತ್ತ ಬಿತ್ತನೆ ಮಾಡಲಾಗಿದೆ’ ಎಂದು ರೈತ ಫಕ್ಕೀರಪ್ಪ ಚವಡಳ್ಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.