ADVERTISEMENT

ಶಿರಸಿ | ಬೆಳೆ ವಿಮೆ: 11ರೊಳಗೆ ನೋಂದಾಯಿಸಿ: ಸತೀಶ ಹೆಗಡೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 4:01 IST
Last Updated 6 ಆಗಸ್ಟ್ 2025, 4:01 IST
   

ಶಿರಸಿ: 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನವಾಗಿದ್ದು ಆ. 11ರೊಳಗೆ ರೈತರು ಪ್ರೀಮಿಯಂ ಮೊತ್ತ ಭರಣ ಮಾಡಿ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಹೇಳಿದರು. 

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ರಿಲಯನ್ಸ್ ಕಂಪನಿಯು ವಿಮೆ ಯೋಜನೆ ಅನುಷ್ಠಾನಕ್ಕೆ ಮುಂದೆ ಬಂದಿದೆ. ರೈತರು ತಕ್ಷಣ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದರು.

ಕಾರ್ಬನ್ ಫೈಬರ್ ದೋಟಿ ಸಹಾಯಧನದ ವಿಚಾರ ಕೋರ್ಟ್‌ನಲ್ಲಿ ಮುಕ್ತಾಯವಾಗಿದ್ದು,  ಶೀಘ್ರದಲ್ಲೇ ಸಹಾಯಧನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಅವರು, ಅಡಿಕೆ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಿದ್ದು, ಮಾರುಕಟ್ಟೆ ಸಮಸ್ಯೆ ಆಗುವ ಸಾಧ್ಯತೆಯಿದೆ. ಹೀಗಾಗಿ ಎಣ್ಣೆ ತಾಳೆ ಬೆಳೆ ಬೆಳೆಯಲು ರೈತರು ಉತ್ಸಾಹ ತೋರಬೇಕು. ಅಡಿಕೆ ಕೊಳೆ ರೋಗ ಸಮೀಕ್ಷೆ ನಡೆದಿದ್ದು, ಶೇ 10ರಷ್ಟು ಕೊಳೆ ವ್ಯಾಪಿಸಿದೆ. ಈಗ ಮಳೆ ಬಿಡುವಿದ್ದು, ಮೈಲುತುತ್ತ ಸಿಂಪಡಣೆ ಮಾಡುವ ಅಗತ್ಯವಿದೆ ಎಂದರು. 

ADVERTISEMENT

ಅಬಕಾರಿ ಇಲಾಖೆಯ ಅಧಿಕಾರಿ ಮಂಜುಕುಮಾರ ನಾಯ್ಕ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣ ಕಂಡುಬಂದರೆ ದಂಡ ಹಾಕಲಾಗುವುದು’ ಎಂದರು. ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಕರ ಮಾತನಾಡಿ, ‘ಸೊಳ್ಳೆ ಹಾಗೂ ನೀರಿನಿಂದ ಹರಡುವ ರೋಗಗಳು ಹೆಚ್ಚುತ್ತಿವೆ. ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ’ ಎಂದರು. 

ಬಿಇಒ ನಾಗರಾಜ ನಾಯ್ಕ ಮಾತನಾಡಿ, ‘ತಾಲ್ಲೂಕಲ್ಲಿ 139 ಶಿಕ್ಷಕರ ಹುದ್ದೆ ಖಾಲಿಯಿದೆ. ಅವುಗಳಲ್ಲಿ 12 ಪ್ರೌಢಶಾಲೆ, 89 ಪ್ರಾಥಮಿಕ ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಎರಡನೇ ಹಂತದಲ್ಲಿ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶಿರಸಿ, ಸಿದ್ದಾಪುರ ಕ್ಷೇತ್ರದಲ್ಲಿ 43, ಯಲ್ಲಾಪುರ ಕ್ಷೇತ್ರದಲ್ಲಿ 27 ಶಾಲೆ, 21 ಅಡುಗೆ ಕೋಣೆಗಳ ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 10 ವಿವೇಕ ಕೊಠಡಿಗಳು ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಬೇಕಿದೆ’ ಎಂದು ಹೇಳಿದರು. 

ಸಿಡಿಪಿಒ ಕಚೇರಿಯ ಹಿರಿಯ ಮೇಲ್ವಿಚಾರಕಿ ಸುಶೀಲಾ ಮೊಗೇರ ಸಭೆಗೆ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 47 ಅಂಗನವಾಡಿ ಕಾರ್ಯಕರ್ತೆಯರು, 3 ಶಿಕ್ಷಕಿಯರ ಹುದ್ದೆ ಖಾಲಿಯಿದೆ ಎಂದರು. ಗೃಹಲಕ್ಷ್ಮಿ ಯೋಜನೆಯಡಿ 3,479 ಜನ ಇನ್ನೂ ನೋಂದಣಿಯಾಗಿಲ್ಲ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ.ಪಿ. ಸತೀಶ, ಇಒ ಚನ್ನಬಸಪ್ಪ ಹಾವಣಗಿ ಇದ್ದರು.

ಮೂರು ಸಂಘಗಳಲ್ಲಿ ತನಿಖೆ

ಸಹಕಾರ ಸಂಘಗಳಲ್ಲಿ ಅವ್ಯವಹಾರ ನಡೆದು ಸಂಘದ ಸದಸ್ಯರಿಗೆ ನಿತ್ಯ ವಹಿವಾಟಿಗೆ ಹಣಕಾಸಿನ ಸಮಸ್ಯೆ ಆಗುತ್ತಿದೆ. ಅವ್ಯವಹಾರದ ತನಿಖೆ ಯಾವ ಹಂತದಲ್ಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಹಕಾರ ಇಲಾಖೆ ಸಹಾಯಕ ನಿರ್ದೇಶಕ ಅಜೀತ ಶಿರಹಟ್ಟಿ, ಈಗಾಗಲೇ ಮೂರು ಸಂಘಗಳಲ್ಲಿ ತನಿಖೆ ನಡೆದಿದ್ದು, ಅವರಿಂದ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಮಾಹಿತಿ ಬಂದ ನಂತರ ಹೆಚ್ಚಿನ ತನಿಖೆಗೆ ಸೂಚಿಸಲಾಗುವುದು ಎಂದರು.  

ನರೇಗಾ ಯೋಜನೆಯಡಿ ಮಾನವ ದಿನ ಸೃಜನೆ ಗುರಿ ಸಾಧಿಸಲು ಅರಣ್ಯ ಇಲಾಖೆ ವಿಫಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಗುರಿ ಸಾಧಿಸದಿದ್ದರೆ ನೋಟಿಸ್‌ ನೀಡಲಾಗುವುದು
ಬಿ.ಪಿ. ಸತೀಶ, ತಾಲ್ಲೂಕು ‍ಪಂಚಾಯಿತಿ ಆಡಳಿತಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.