ಮುಂಡಗೋಡ: ‘ಸಮಾಜದ ಆಂತರಿಕ ಬೆಸುಗೆ ಗಟ್ಟಿಯಾಗಲು, ಸಂಸ್ಕೃತಿ ಉಳಿಯಲು ಹಬ್ಬಗಳು ನಡೆಯಬೇಕು’ ಎಂದು ಗದಗ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಬಂಕಾಪುರ ರಸ್ತೆಯ ಆಂಜನೇಯ ದೇವಸ್ಥಾನ ಸಮೀಪ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಶನಿವಾರ ನಡೆದ ಧಾರ್ಮಿಕ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.
ಹಬ್ಬಗಳು ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯಲು, ಉಳಿಸಲು ಪೂರಕವಾಗಿವೆ ಎಂದರು.
ಮಣಕವಾಡ ಅನ್ನದಾನೀಶ್ವರ ಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ದೇವರನ್ನು ಬಿಟ್ಟು ಬದುಕುವ ಸಂಸ್ಕೃತಿ ನಮ್ಮದಲ್ಲ. ಧರ್ಮದ ಮೇಲೆ ಅನ್ಯಾಯವಾದಾಗ ಅದನ್ನು ಖಂಡಿಸಲು ಎದ್ದು ನಿಲ್ಲುವಂತ ಮನಸ್ಸು ಬೇಕು. ಸಭ್ಯತೆಗಳನ್ನು ಕಲಿಸಲೆಂದೇ ಹಿಂದು ಹಬ್ಬಗಳ ಆಚರಣೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ಹಿರೇಮಠದ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಹಿಂದೂ ಮಹಾಸಭಾ ಗಣಪತಿ ಮಂಡಳಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ಗುರುಸಿದ್ಧಯ್ಯ ಹಿರೇಮಠ, ಸುರೇಶ ಕಲ್ಲೋಳ್ಳಿ, ಸಿದ್ಧಣ್ಣ, ಪ್ರಕಾಶ ಬಡಿಗೇರ, ಮಂಜುನಾಥ ಎಚ್.ಪಿ., ಶಂಕರ ಲಮಾಣಿ, ರವಿ ಹಾವೇರಿ, ವಿಶ್ವನಾಥ ನಾಯರ, ಮಲ್ಲಿಕಾರ್ಜುನ ಗೌಳಿ, ಶಿವು ಮತ್ತಿಗಟ್ಟಿ, ರವಿ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.