ADVERTISEMENT

ಭಟ್ಕಳ: ₹ 48 ಲಕ್ಷ ಮೌಲ್ಯದ ವಾಚ್ ಒಡೆದ ಕಸ್ಟಮ್ಸ್ ಅಧಿಕಾರಿಗಳು!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 15:28 IST
Last Updated 7 ಮಾರ್ಚ್ 2021, 15:28 IST
ಭಟ್ಕಳದ ಇಸ್ಮಾಯಿಲ್ ಅವರ ಕೈಗಡಿಯಾರವನ್ನು ಕಲ್ಲಿಕೋಟೆಯ ಕಸ್ಟಮ್ಸ್ ಅಧಿಕಾರಿಗಳು ಪುಡಿ ಮಾಡಿರುವುದು
ಭಟ್ಕಳದ ಇಸ್ಮಾಯಿಲ್ ಅವರ ಕೈಗಡಿಯಾರವನ್ನು ಕಲ್ಲಿಕೋಟೆಯ ಕಸ್ಟಮ್ಸ್ ಅಧಿಕಾರಿಗಳು ಪುಡಿ ಮಾಡಿರುವುದು   

ಭಟ್ಕಳ: ಚಿನ್ನ ಅಡಗಿಸಿಟ್ಟು ಸಾಗಿಸಿದ ಅನುಮಾನದಲ್ಲಿ ಭಟ್ಕಳದ ವ್ಯಕ್ತಿಯೊಬ್ಬರ ₹ 48 ಲಕ್ಷ ಮೌಲ್ಯದ ಕೈಗಡಿಯಾರವನ್ನು, ಸೀಮಾ ಸುಂಕ ಇಲಾಖೆಯ (ಕಸ್ಟಮ್ಸ್) ಅಧಿಕಾರಿಗಳು ಒಡೆದು ಹಾಕಿದ್ದಾರೆ. ಈ ಪ್ರಕರಣವೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ದುಬೈನಲ್ಲಿ ರಫ್ತು ವ್ಯವಹಾರ ನಡೆಸುತ್ತಿರುವ ಭಟ್ಕಳದ ಕಾರಗದ್ದೆಯ ನಿವಾಸಿ ಮಹ್ಮದ್ ಇಸ್ಮಾಯಿಲ್ ಅವರು ಮಾರ್ಚ್ 3ರಂದು ಕೇರಳದ ಕಲ್ಲಿಕೋಟೆಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನದಿಂದ ಇಳಿದ ಅವರನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಅವರ ಧರಿಸಿದ್ದ ₹ 48 ಲಕ್ಷ ಮೌಲ್ಯದ ‘ಆಡಿ ಮೂವರ್ಸ್ ಪಿಗುಯೆಟ್’ ಕಂಪೆನಿಯ ಕೈಗಡಿಯಾರವನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಚಿನ್ನ ಹುದುಗಿಸಿ ಸಾಗಿಸಿರಬಹುದೇ ಎಂಬ ಅನುಮಾನದಲ್ಲಿ ಒಡೆದು ಹಾಕಿ ಹುಡುಕಾಡಿದ್ದರು.

ಗಡಿಯಾರದ ಮೌಲ್ಯವನ್ನು ಅರಿಯದೇ ಅದನ್ನು ಪುಡಿಗಟ್ಟಿದ್ದ ಅಧಿಕಾರಿಗಳು, ಅದರಲ್ಲಿ ಬಂಗಾರವಿಲ್ಲವೆಂದು ಖಚಿತವಾದ ಬಳಿಕ ಟ್ರೇನಲ್ಲಿ ಇಟ್ಟು ಇಸ್ಮಾಯಿಲ್ ಅವರಿಗೆ ಹಿಂದಿರುಗಿಸಿದ್ದರು. ಪುಡಿಪುಡಿಯಾದ ಕೈಗಡಿಯಾರವನ್ನು ಕಂಡು ಕಂಗಾಲಾದ ಅವರು, ತಮ್ಮ ಗಡಿಯಾರವನ್ನು ಮೊದಲಿನ ಸ್ಥಿತಿಯಲ್ಲೇ ನೀಡುವಂತೆ ಪಟ್ಟು ಹಿಡಿದರು. ಬಳಿಕ ಗಡಿಯಾರದ ಮೌಲ್ಯವನ್ನು ಕೇಳಿದ ಕಸ್ಟಮ್ಸ್ ಅಧಿಕಾರಿಗಳೂ ಹೌಹಾರಿದ್ದರು.

ADVERTISEMENT

ಈ ಕುರಿತು ಇಸ್ಮಾಯಿಲ್ ಮಾರ್ಚ್ 4ರಂದು ಕಲ್ಲಿಕೋಟೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರ ವಿಚಾರಣೆಯು ಮಾರ್ಚ್ 8ರಂದು ಅಲ್ಲಿನ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಅವರ ಸಹೋದರ ಇಬ್ರಾಹಿಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.