
ದಾಂಡೇಲಿ: ವನ್ಯ ಜೀವಿಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾರ್ನ್‌ಬಿಲ್ ಪಕ್ಷಿ ಕೇವಲ ಒಂದು ಪಕ್ಷಿಯಲ್ಲ. ಇದು ನಮ್ಮ ಅರಣ್ಯ ಸಂಪತ್ತಿನ ಆರೋಗ್ಯದ ಸಂಕೇತ. ಅಲ್ಲಿ ಮಾತ್ರ ಹಾರ್ನ್‌ಬಿಲ್ ಪಕ್ಷಿಗಳು ನೆಲೆಸುತ್ತವೆ. ಆರೋಗ್ಯವಂತ ಪರಿಸರವನ್ನು ನಾವುಗಳು ಹೊಂದಿದ್ದೇವೆ. ಅದೇ ಅದೃಷ್ಟ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಹೇಳಿದರು.
ಶಿರಸಿಯ ಕೆನರಾ ವೃತ್ತದ ಹಳಿಯಾಳ ವಿಭಾಗದ ವತಿಯಿಂದ ದಾಂಡೇಲಿ ಹಾರ್ನ್‌ಬಿಲ್ ಭವನದಲ್ಲಿ ಎರಡು ದಿನಗಳ ಕಾಲ ನಡೆಯುವ ಹಾರ್ನ ಬಿಲ್ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದಲ್ಲಿ 9 ಹಾರ್ನ್‌ಬಿಲ್ ಪ್ರಬೇಧಗಳು ಇದ್ದರೆ, ದಾಂಡೇಲಿ ಅಥವಾ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಪ್ರಭೇದಗಳು ಕಂಡು ಬರುತ್ತವೆ. ಇಂದು ಆಚರಿಸಲಾಗುತ್ತಿರುವ ಹಬ್ಬ ಕೇವಲ ಒಂದು ಕಾರ್ಯಕ್ರಮ ಅಲ್ಲ. ನಮ್ಮ ಸಂಸ್ಕೃತಿ ಮತ್ತು ನಿಸರ್ಗವನ್ನು ಸಮತೋಲನ ಸಂಗಮ ಮಾಡುವ ಉದ್ದೇಶದಿಂದ ಕಳೆದ ಎಂಟು ವರ್ಷಗಳಿಂದ ಈ ಹಾರ್ನ್‌ಬಿಲ್ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ರಾಜ್ಯ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಪ್ರಶಾಂತ ಉದ್ಘಾಟಿಸಿದರು.
ಸಿಎಫ್ಒ ಮಂಜುನಾಥ ಚವ್ಹಾಣ ಮಾತನಾಡಿ, 2011 ರಲ್ಲಿ ಈ ಪ್ರದೇಶವನ್ನು ಹಾರ್ನಬಿಲ್ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಯಿತು. ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಈ ಹಾರ್ನ್ ಬಿಲ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಭಾಗದಲ್ಲಿ ಹುಲಿಯನ್ನು ನೋಡಲು ಬರುವ ಪ್ರವಾಸಿಗರು ಒಂದೆಡೆಯಾದರೆ, ಇನ್ನೊಂದೆಡೆ ಹಾರ್ನ್‌ಬಿಲ್‌ಗಳನ್ನು ನೋಡಲು ಬರುವ ಪ್ರತ್ಯೆಕ ಪ್ರವಾಸಿ ಬಳಗ ಇದೆ ಎಂದರು.
ಹಳಿಯಾಳದ ಎಸಿಎಫ್ ಪ್ರಶಾಂತ ಕುಮಾರ್.ಕೆ.ಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಅರಣ್ಯ ವನ್ಯಜೀವಿ ಪರಿಸರ ಸಂರಕ್ಷಣೆ ಹಾಗೂ ಸ್ಥಳೀಯ ಬುಡಕಟ್ಟು ಸಂಸ್ಕೃತಿಗಳನ್ನು ಬೇರೆ ಪ್ರದೇಶಗಳಿಗೆ ಪರಿಚಯಿಸುವ ಮೂಲಕ ಸಂಸ್ಕೃತಿಗೆ ವಿನಿಮಯ ಹಾಗೂ ದೇಶದ ನಾನಾ ಭಾಗಗಳಿಂದ ಬಂದಿರುವ ತಜ್ಞರು ಪಕ್ಷೆ ಕುರಿತು ಮಾಹಿತಿ ಹಾಗೂ ಡಾಕ್ಯುಮೆಂಟರಿಗಳನ್ನು ಪ್ರದರ್ಶನ ನೀಡಲಿದ್ದಾರೆ ಎಂದರು.
ಅರಣ್ಯ ಇಲಾಖೆಯ ವಿವಿಧ ಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಪಾಟೀಲ್ (ಅರಣ್ಯ ಅಪರಾಧ), ವಿಜಯಕುಮಾರ್ ಆಳಗಿ (ವನ್ಯಜೀವಿ ಸಂಘರ್ಷ), ರಮಾಕಾಂತ ನಾಯ್ಕ (ಸಸ್ಯ ಸಂರಕ್ಷಣೆ), ಸುರೇಶ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಅರಣ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾನ್ಯತಾ ವಾಸರೆ ಪ್ರಾರ್ಥಿಸಿದರು. ಎಸಿಎಫ್ ಸಂತೋಷ್ ಚವ್ಹಾಣ ಸ್ವಾಗತಿಸಿದರು, ಶಿಕ್ಷಕಿ ಆಶಾ ನಿರೂಪಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್.ಸಿ, ಹರ್ಷಭಾನು ಜಿ.ಪಿ, ಸಂದೀಪ್ ಸೂರ್ಯವಂಶಿ, ಯೋಗೀಶ್ ಸಿ.ಕೆ, ಮಂಜುನಾಥ ನಾವಿ, ನಾಗಶೆಟ್ಟಿ ಆರ್.ಎಸ್, ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯಕ್ತ ವಿವೇಕ್ ಬನ್ನೆ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಇತರರು ಇದ್ದರು.
ವಾತಾವರಣ ನಿರಂತರವಾಗಿ ಕಾಯ್ದುಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದುವೇ ಹಾರ್ನ್ ಬಿಲ್ ಹಕ್ಕಿಯ ಉಳಿವಿಗೆ ಸಹಕಾರಿ
–ಸಂತೋಷಕುಮಾರ ಪ್ರಶಾಂತ ರಾಜ್ಯ ಅರಣ್ಯ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ
ಹಾರ್ನ್ ಬಿಲ್ ಜಾಗೃತಿ ಜಾಥಾಕ್ಕೆ ಚಾಲನೆ
ಬೆಳಿಗ್ಗೆ ನಗರಸಭೆಯ ಆವರಣದಿಂದ ಹಾರ್ನ್‌ಬಿಲ್ ಭವನದವರೆಗೆ ನಡೆದ ಜಾಗೃತಿ ಜಾಥಾವನ್ನು ತಹಶೀಲ್ದಾರ್ ಶೈಲೇಶ್ ಪರಮಾನಂದ ಮತ್ತು ನಗರಸಭೆ ಪೌರಾಯುಕ್ತ ವಿವೇಕ್ ಬನ್ನೆ ಚಾಲನೆ ನೀಡಿದರು. ಜಾಥಾ ಉದ್ದಕ್ಕೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿ ಫಲಕ ಪ್ರದರ್ಶಿಸಿ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ಹಕ್ಕಿಪಿಕ್ಕಿ ಕುಣಿತ ಹಾರ್ನ್ ಬಿಲ್ ಛದ್ಮವೇಷ ಹನುಮ ಕುಣಿತ ಗೌಳಿಗರ ಕುಣಿತ ಮೆರವಣಿಗೆಯಲ್ಲಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.