
ದಾಂಡೇಲಿ: ಇಲ್ಲಿನ ಬಂಬೂಗೇಟ್ ಸಮೀಪದ ನಿವಾಸಿ, ಬಡ ಕುಟುಂಬದ ಪದ್ಮಾವತಿ ಮಾದಿಗ ಅವರು ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪದ್ಮಾವತಿ ಅವರ ಕುಟುಂಬವು ಬದುಕಿಗೆ ಚಮ್ಮಾರಿಕೆ ವೃತ್ತಿಯನ್ನು ಅವಲಂಬಿಸಿದೆ.
ಬಂಬೂಗೇಟ್ ಸಮೀಪ ಚಿಕ್ಕ ಮನೆಯಲ್ಲಿ ವಾಸವಿರುವ ಈ ಕುಟುಂಬಕ್ಕೆ ತಂದೆ ನಾಗಪ್ಪ ಚಮ್ಮಾರಿಕೆ ವೃತ್ತಿಯಿಂದ ಗಳಿಸುವ ಆದಾಯ ನಿರ್ವಹಣೆಗೆ ಆಸರೆಯಾಗಿತ್ತು. ಐದು ವರ್ಷಗಳ ಹಿಂದೆ ಅನಾರೋಗ್ಯ ದಿಂದ ನಾಗಪ್ಪ ಮೃತಪಟ್ಟ ಬಳಿಕ ಕುಟುಂಬದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತು. ಇಂತಹ ಕಷ್ಟದಲ್ಲೂ ಪದ್ಮಾವತಿ ಓದಿ ಸಾಧನೆ ಮಾಡಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಪದ್ಮಾವತಿ ಅವರು ಬಂಗೂರುನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿ, ಬೈಲಹೊಂಗಲದಲ್ಲಿ ಕಾನೂನು ಪದವಿಯನ್ನು ಪಡೆದಿದ್ದರು. ಸದ್ಯ ಹಳಿಯಾಳದಲ್ಲಿ ವಕೀಲರಾಗಿದ್ದರು.
‘ಸಣ್ಣ ಪುಟ್ಟ ಕೆಲಸ ಮಾಡುತ್ತಲೇ ಕಾನೂನು ಪದವಿಯನ್ನು ಪೂರೈಸಿದೆ. ಕಾನೂನು ಓದಿಗೆ ಆರ್ಥಿಕ ಕಷ್ಟವಿದ್ದರೂ, ನನ್ನ ಸಹೋದರರು ಚಮ್ಮಾರಿಕೆ ವೃತ್ತಿಯಿಂದ ಗಳಿಸಿದ ಹಣದಿಂದ ಕುಟುಂಬ ನಿರ್ವಹಣೆಯ ಜೊತೆಗೆ ನನ್ನ ಓದಿಗೂ ನೆರವಾದರು’ ಎಂದು ಪದ್ಮಾವತಿ ಮಾದಿಗ ಹೇಳಿದರು.
‘ನ್ಯಾಯಾಧೀಶ ಹುದ್ದೆಯ ಪರೀಕ್ಷೆಯ ಓದಿನಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‍ಯು) ನಡೆಸಿದ ಆನ್‌ಲೈನ್ ತರಬೇತಿ ಪ್ರಯೋಜನವಾಯಿತು. ಕೀಳರಿಮೆಯಿಂದ ಹೊರಬಂದು ಸಮಾಜ ಗುರುತಿಸುವಂತಹ ಸಾಧನೆಯನ್ನು ಮಾಡಬೇಕು ಎನ್ನುವ ತುಡಿತ ಈ ಸಾಧನೆಗೆ ಪ್ರೇರಣೆಯಾಯಿತು’ ಎಂದರು.
‘ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು, ನ್ಯಾಯಾಧೀಶೆ ಆಗುವ ಕನಸನ್ನು ಹಂಚಿಕೊಂಡಿದ್ದರು. ಪರೀಕ್ಷೆಗೆ ಬೇಕಾದ ಸಹಾಯ ಮಾಡಿದ್ದೇನೆ. ಪರೀಕ್ಷೆಗಾಗಿ ತುಂಬಾ ಶ್ರಮ ಪಟ್ಟಿದ್ದಾರೆ’ ಎಂದು ವಕೀಲೆ ರತ್ನದೀಪ ಎನ್.ಎಂ ಹೇಳಿದರು.
ತಳ ಸಮುದಾಯದ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಗುರಿಯಿದೆ. ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವೆಪದ್ಮಾವತಿ ಮಾದಿಗ ಸಿವಿಲ್ ನ್ಯಾಯಾಧೀಶೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.