ADVERTISEMENT

ಕೈಗಾ ದಾಖಲೆ ಮೀರಿದ ಡಾರ್ಲಿಂಗ್‌ಟನ್

ನಿರಂತರ ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದಾಖಲೆ

ಸದಾಶಿವ ಎಂ.ಎಸ್‌.
Published 19 ಸೆಪ್ಟೆಂಬರ್ 2020, 19:31 IST
Last Updated 19 ಸೆಪ್ಟೆಂಬರ್ 2020, 19:31 IST
ಕಾರವಾರ ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರ (ಸಾಂದರ್ಭಿಕ ಚಿತ್ರ)
ಕಾರವಾರ ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರ (ಸಾಂದರ್ಭಿಕ ಚಿತ್ರ)   

ಕಾರವಾರ: ನಿರಂತರವಾಗಿ 962 ದಿನ ವಿದ್ಯುತ್ ಉತ್ಪಾದಿಸಿದ್ದ ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕದ ವಿಶ್ವದಾಖಲೆಯನ್ನು ಕೆನಡಾದ ಡಾರ್ಲಿಂಗ್‌ಟನ್ ಅಣುವಿದ್ಯುತ್ ಸ್ಥಾವರವು ಅಳಿಸಿಹಾಕಿದೆ. ಈ ಸ್ಥಾವರದ ಒಂದನೇ ಘಟಕವು ಸೆ.19ರಂದು 965ನೇ ದಿನದ ಕಾರ್ಯಾಚರಣೆ ಮಾಡಿದೆ.

ಭಾರಜಲ ಮಾದರಿಯ ರಿಯಾಕ್ಟರ್ ಹೊಂದಿರುವ ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕವು, 2018ರ ಡಿ.10ರಂದು ಇಂಗ್ಲೆಂಡ್‌ನ ಹೇಶಮ್ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ದಾಖಲೆಯನ್ನು ಮೀರಿತ್ತು. ಇದರ ಎರಡನೇ ಘಟಕವು 2016ರ ಆ.1ರವರೆಗೆ ನಿರಂತರವಾಗಿ 940 ದಿನ ಕಾರ್ಯಾಚರಣೆ ಮಾಡಿತ್ತು.

ಕೈಗಾದ ಮೊದಲನೇ ಘಟಕವನ್ನು 2018ರ ಡಿ.31ರಂದು 962ನೇ ದಿನದ ಕಾರ್ಯಾಚರಣೆಯ ಬಳಿಕ ನಿರ್ವಹಣೆಗಾಗಿ ಸ್ಥಗಿತಗೊಳಿಸಲಾಗಿತ್ತು. ಈ ಸ್ಥಾವರದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿ ಟ್ವೀಟ್ ಮಾಡಿದ್ದರು. ಸ್ವದೇಶಿ ವಿನ್ಯಾಸ ಹೊಂದಿರುವ ಕೈಗಾ ಸ್ಥಾವರದ ಒಂದನೇ ಘಟಕವು, ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿದ್ದು ಬಹುದೊಡ್ಡ ಸಾಧನೆ ಎಂದು ಅವರು ವರ್ಣಿಸಿದ್ದರು.

ADVERTISEMENT

ಕೈಗಾ ಅಣು ವಿದ್ಯುತ್ ಸ್ಥಾವರದ ಇತರ ಮೂರು ಘಟಕಗಳೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸ್ಥಾವರದ ಎರಡನೇ ಘಟಕವು 698 ದಿನ, ಮೂರನೇ ಘಟಕವು 542 ದಿನ ಹಾಗೂ ನಾಲ್ಕನೇ ಘಟಕವು 550 ದಿನ ನಿರಂತರ ಕಾರ್ಯ ನಿರ್ವಹಿಸಿದ ದಾಖಲೆ ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾರ್ಲಿಂಗ್‌ಟನ್ ಅಣು ವಿದ್ಯುತ್ ಸ್ಥಾವರವೂ ಭಾರಜಲ ಮಾದರಿಯ ರಿಯಾಕ್ಟರ್ ಅನ್ನೇ ಹೊಂದಿದೆ. ಈ ಸ್ಥಾವರವು 1992ರ ನ.14ರಂದು ಉದ್ಘಾಟನೆಯಾಗಿತ್ತು. ಇದರ ಮೊದಲ ಘಟಕವನ್ನು ನಿರ್ವಹಣೆಗಾಗಿ ಸ್ಥಗಿತಗೊಳಿಸಿದ ಬಳಿಕ 2018ರ ಜ.26ರಂದು ಪುನಃ ಚಾಲನೆ ನೀಡಲಾಗಿತ್ತು. ಈ ಘಟಕವು 878 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ ಎಂದು ಸ್ಥಾವರದ ವೆಬ್‌ಸೈಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.