ADVERTISEMENT

‘ಅಕ್ರಮ ಮದ್ಯ ಸಾಗಾಟಕ್ಕೆ ಕಡಿವಾಣ ಬೀಳಲಿ’

ದಕ್ಷಿಣ ಗೋವಾ ಡಿ.ಸಿ. ಜತೆ ಸಭೆ ನಡೆಸಿದ ಉ.ಕ. ಡಿ.ಸಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 15:49 IST
Last Updated 20 ಮಾರ್ಚ್ 2023, 15:49 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು   

ಕಾರವಾರ: ‘ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಚುನಾವಣೆ ಸಮೀಪಿಸಿದ್ದು ಮಾದಕ ಪದಾರ್ಥ, ಮೌಲ್ಯಯುತ ವಸ್ತುಗಳ ಸಾಗಾಟದ ಮೇಲೆ ನಿಗಾ ಇಡಬೇಕು’ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವ ಸಂಬಂಧ ಸೋಮವಾರ ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಎ.ಅಶ್ವಿನ್ ಚಂದು ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಪೊಲೀಸ್, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಗಡಿ ಭಾಗದಲ್ಲಿರುವ ತಪಾಸಣೆ ಗೇಟ್‍ಗಳಲ್ಲಿ ಪರಿಶೀಲನೆ ಕಾರ್ಯ ಚುರುಕಗೊಳಿಸಬೇಕು. ಅನುಮಾನಾಸ್ಪದ ನಡುವಳಿಕೆ ಇದ್ದರೆ ಅಂತಹವರ ಬಗ್ಗೆ ಮಾಹಿತಿ ನೀಡಬೇಕು. ವಾಹನಗಳ ಅಥವಾ ತಲೆಹೊರೆ ಮೂಲಕ ಮದ್ಯ, ಮಾದಕ ಪದಾರ್ಥ, ದಾಖಲೆ ರಹಿತ ಹಣ, ಆಭರಣ ಸಾಗಿಸುತ್ತಿದ್ದರೆ ತಡೆದು ತಕ್ಷಣ ಪ್ರಕರಣ ದಾಖಲಿಸಬೇಕು’ ಎಂದರು.

ADVERTISEMENT

‘ಕರ್ನಾಟಕದ ಮದ್ಯದ ದರಕ್ಕಿಂತ ಗೋವಾ ರಾಜ್ಯದಲ್ಲಿ ಮದ್ಯದ ದರ ಅಗ್ಗವಾಗಿರುವುದರಿಂದ ಅಲ್ಲಿಂದ ವ್ಯಾಪಕ ಪ್ರಮಾಣದಲ್ಲಿ ಮದ್ಯ ಸರಬರಾಜು ಮಾಡಿ ದಾಸ್ತಾನು ಮಾಡಿಕೊಳ್ಳುವ ಸಂಭವ ಹೆಚ್ಚು. ಹೀಗಾಗಿ ಈ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ಮಾಜಾಳಿ, ಅನಮೋಡ್ ತಪಾಸಣಾ ಗೇಟ್‍ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ-1 ಜಯಲಕ್ಷ್ಮಮ್ಮ, ಅಬಕಾರಿ ನಿರೀಕ್ಷಕರು ಜಗದೀಶ್ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.