ADVERTISEMENT

ಕಾರವಾರ ಕೆಎಚ್‌ಬಿ ಹೊಸ ಬಡಾವಣೆ: ಯೋಜನೆಯ ಪ್ರಕಾರ ಕಾಮಗಾರಿಗೆ ಆಗ್ರಹ

ನಾಗರಿಕರಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 11:40 IST
Last Updated 29 ಸೆಪ್ಟೆಂಬರ್ 2018, 11:40 IST
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕಾರವಾರದ ಕೆಎಚ್‌ಬಿ ಹೊಸ ಬಡಾವಣೆಗೆ ಶುಕ್ರವಾರ ಭೇಟಿ ನೀಡಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕಾರವಾರದ ಕೆಎಚ್‌ಬಿ ಹೊಸ ಬಡಾವಣೆಗೆ ಶುಕ್ರವಾರ ಭೇಟಿ ನೀಡಿದರು.   

ಕಾರವಾರ:ನಗರದ ಕೆಎಚ್‌ಬಿ ಹೊಸ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯ ಮೂರನೇ ಹಂತದಲ್ಲಿ ರಸ್ತೆ ಕಾಮಗಾರಿಗಳನ್ನು ಬದಲಾವಣೆ ಮಾಡಬಾರದು ಎಂದು ಸ್ಥಳಿಯ ನಿವಾಸಿಗಳು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಯೋಜನೆಯಲ್ಲಿ ಈಗಾಗಲೇ ಪ್ರಸ್ತಾಪ ಮಾಡಲಾಗಿರುವ ಕಾಮಗಾರಿಗಳನ್ನೇ ಮಾಡಬೇಕು. ನಂತರ ಉಳಿದ ಕಾಮಗಾರಿ ಮುಂದುವರಿಸಲಿ ಎಂದುಒತ್ತಾಯಿಸಿ ಸಾಂಕೇತಿಕವಾಗಿ ಪ್ರತಿಭಟನೆ ದಾಖಲಿಸಲಾಯಿತು. 100 ಮೀಟರ್ ಉದ್ದವಿರುವ ಎ1 ಮತ್ತು ಎ2 ರಸ್ತೆಗಳನ್ನು 70 ಮೀಟರ್ ಮಾತ್ರ ಕಾಂಕ್ರೀಟ್ ಮಾಡಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಮುಂದೆ ಬರುವ 150 ಮೀಟರ್‌ಗೂ ಹೆಚ್ಚು ಉದ್ದದ ರಸ್ತೆಯನ್ನೂ 70 ಮೀಟರ್ ಮಾತ್ರ ಮಾಡುವುದಾಗಿ ಹೇಳಲಾಗುತ್ತಿದೆ. ಯೋಜನೆಯಲ್ಲಿ ಪ್ರಸ್ತಾಪವಿಲ್ಲದ ಕಡೆಯಲ್ಲೂ ಕಾಮಗಾರಿ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಇದೇವೇಳೆ ಒತ್ತಾಯಿಸಲಾಯಿತು.

ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸಲು ಆದ್ಯತೆ ನೀಡಬೇಕು ಎಂದೂ ಇದೇವೇಳೆ ಮನವಿ ಮಾಡಲಾಯಿತು.

ADVERTISEMENT

ಕೆಎಚ್‌ಬಿ ಕಾಲೊನಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಕಾಲೊನಿಯಲ್ಲಿ ಹೊಸದಾಗಿ ಸರ್ವೆ ಮಾಡಲು ಸರ್ವೆ ಇಲಾಖೆಗೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ಪೌರಾಯುಕ್ತಬಿ.ಅಭಿಜಿನ್ ಅವರನ್ನು ಒತ್ತಾಯಿಸಲಾಯಿತು.

ಜಿಲ್ಲಾಧಿಕಾರಿ ಭೇಟಿ:ನಾಗರಿಕರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಶುಕ್ರವಾರ ಸಂಜೆ ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಜತೆ ಚರ್ಚಿಸಿದ ಅವರು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನಾಗರಿಕ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷ ಗಂಗಾಧರ ಜಾಂಬವಳಿಕರ, ವಾರ್ಡ್ ಸದಸ್ಯೆ ಅನುಷಾ ಕುಬಾಡೆ, ಮುಖಂಡರಾದ ಎಂ.ವಿ.ರೇವಣಕರ್, ಪ್ರತಿಭಾ ಮೇಸ್ತಾ, ರೇಖಾ ಸಿಸ್ಟರ್, ಮಚ್ಚೇಂದ್ರ ಮಹಾಲೆ, ಲಕ್ಷ್ಮಣ ಜಿ ನಾಯಕ ಸೇರಿದಂತೆ 50ಕ್ಕೂ ಹೆಚ್ಚು ಜನರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.