ADVERTISEMENT

ಬಸ್ ಪಾಸ್ ಸಮಸ್ಯೆ ನಿವಾರಿಸಲು ಸೂಚನೆ

ಜಿ.ಪಂ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೋಹನರಾಜ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 17:20 IST
Last Updated 2 ನವೆಂಬರ್ 2021, 17:20 IST
ಕಾರವಾರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್ ಮಾತನಾಡಿದರು. ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ ಇದ್ದಾರೆ.
ಕಾರವಾರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್ ಮಾತನಾಡಿದರು. ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ ಇದ್ದಾರೆ.   

ಕಾರವಾರ: ‘ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಮಸ್ಯೆ ಆಗಿರುವ ದೂರುಗಳಿವೆ. ಶಿರಸಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಯಾವುದೇ ವಿದ್ಯಾರ್ಥಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಲೆಗಳಲ್ಲಿ ಮಕ್ಕಳು ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಅವರು ಅದರ ಶುಚಿತ್ವಕ್ಕೂ ಮಹತ್ವ ನೀಡುವಂತೆ ತಿಳಿಸಬೇಕು. ಒಂದು ವಾರದಿಂದ ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಎಷ್ಟಿದೆ, ಘಟ್ಟದ ಮೇಲೆ ಹಾಗೂ ಕರಾವಳಿ ಭಾಗದಲ್ಲಿ ಒಂದೇ ರೀತಿ ಇದೆಯೇ, ಕಲಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆಯೇ ಎಂಬ ಅಂಶಗಳನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’‌ ಎಂದು ತಿಳಿಸಿದರು.

ADVERTISEMENT

‘ಮಕ್ಕಳತ್ತ ಗಮನ ಹರಿಸಿ’:

‘ಕೋವಿಡ್-19 ಕಾರಣದಿಂದ ಮಕ್ಕಳು ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಇದ್ದರು. ಅವರಿಗೆ ತಕ್ಷಣಕ್ಕೆ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಇದರಿಂದ ಕಲಿಕೆಯಲ್ಲಿ ಹಿಂದೆ ಉಳಿಯುವ ಸಾಧ್ಯತೆಗಳಿವೆ. ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನ ಹರಿಸುವಂತೆ ಮಾಡಬೇಕು’ ಎಂದು ಕೆ.ಪಿ.ಮೋಹನರಾಜ್ ಸೂಚಿಸಿದರು.

‘ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಕಾರ್ಯ ಉತ್ತಮವಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಲಸಿಕೆ ಪಡೆಯುವಂತೆ ಪ‍್ರೇರೇಪಿಸಬೇಕು. ವೈದ್ಯಕೀಯ ಇಂಟರ್ನ್‍ಶಿಪ್‍ನಲ್ಲಿರುವ ವೈದ್ಯರನ್ನು ಲಸಿಕಾ ಕಾರ್ಯದಲ್ಲಿ ಬಳಸಿಕೊಳ್ಳಿ. ವೈದ್ಯರು ಎಲ್ಲ ಕಡೆ ಸರಿಯಾಗಿ ಇರುವಂತೆ ಹಂಚಿಕೆ ಮಾಡನಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಅವರಿಗೆ ಸೂಚಿಸಿದರು.

‘ಕೊರೊನಾ ಕಾರಣದಿಂದ ಹಲವರು ಉದ್ಯೋಗವಿಲ್ಲದೇ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸವನ್ನು ಮಾಡಿಸಿ ಅವರಿಗೆ ಪರಿಹಾರ ಕಲ್ಪಿಸಬಹುದು. ಪ್ರಗತಿ ಕುಂಠಿತವಾಗಬಾರದು. ಯಾವುದೇ ಇಲಾಖೆಯ ವಿರುದ್ದ ದೂರುಗಳು ಬರದಂತೆ ಕಾರ್ಯನಿರ್ವಹಿಸಿ’‌ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಪ್ರಿಯಾಂಗಾ, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.