ADVERTISEMENT

ಶೈಕ್ಷಣಿಕ ಜಿಲ್ಲೆಯ ದಶಮಾನೋತ್ಸವ 27ಕ್ಕೆ

ಸಾಧನೆಗಳ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:40 IST
Last Updated 24 ಡಿಸೆಂಬರ್ 2019, 16:40 IST

ಶಿರಸಿ: ಘಟ್ಟದ ಮೇಲಿನ ತಾಲ್ಲೂಕುಗಳನ್ನೊಳಗೊಂಡ ಶಿರಸಿ ಶೈಕ್ಷಣಿಕ ಜಿಲ್ಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಡಿ.27ರಂದು ಆಚರಿಸಲು ಭರದ ಸಿದ್ಧತೆ ನಡೆದಿದೆ.

ಡಿಡಿಪಿಐ ದಿವಾಕರ ಶೆಟ್ಟಿ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 2009ರಲ್ಲಿ ಪ್ರಾರಂಭವಾಗಿರುವ ಶೈಕ್ಷಣಿಕ ಜಿಲ್ಲೆಯು ಅಕ್ಟೋಬರ್ 1ಕ್ಕೆ 10ನೇ ವರ್ಷಕ್ಕೆ ಕಾಲಿಟ್ಟಿದೆ. ಸಂದರ್ಶನ ಸಪ್ತಾಹ, ಗುಣೋತ್ಸವ, ಇ–ಕಲಿಕೋತ್ಸವದಂತಹ ಅನೇಕ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಈ ಜಿಲ್ಲೆ ಗಮನ ಸೆಳೆದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ದಶಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಉದ್ಘಾಟಿಸುವರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ, ಆಯುಕ್ತ ಜಿ.ಜಗದೀಶ, ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ್ ಭಾಗವಹಿಸುವರು ಎಂದರು.

ಡಿಡಿಪಿಐ ಕಚೇರಿಯಲ್ಲಿ ಸಾಧನೆಗಳ ವಸ್ತು ಪ್ರದರ್ಶನ, ವಿಷಯವಾರು ವಸ್ತುಗಳ ಪ್ರದರ್ಶನ, ಸಾಧನೆಯ ನುಡಿಚಿತ್ರ ಪ್ರದರ್ಶನ, ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 2000ಕ್ಕೂ ಅಧಿಕ ಶಿಕ್ಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಶಮಾನೋತ್ಸವದ ಅಂಗವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ದೀಪಾಲಂಕಾರ ಮಾಡುವಂತೆ ಸೂಚಿಸಲಾಗಿದೆ ಎಂದರು. ಬಿಇಒ ಸದಾನಂದ ಸ್ವಾಮಿ, ಶಿಕ್ಷಣಾಧಿಕಾರಿಗಳಾದ ಸಿ.ಎಸ್.ನಾಯ್ಕ, ಎಂ.ಎಸ್.ಹೆಗಡೆ ಉಪಸ್ಥಿತರಿದ್ದರು.

ADVERTISEMENT

ವಿಜ್ಞಾನ ಹಬ್ಬ:

ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ವಿಜ್ಞಾನ ಹಬ್ಬ ಡಿ.26ರಿಂದ 28ರವರೆಗೆ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ನಡೆಯಲಿದೆ. 14 ಕ್ಲಸ್ಟರ್‌ಗಳಲ್ಲಿ ವಿಜ್ಞಾನ ಹಬ್ಬ ಮುಗಿದಿದೆ. ಶಿರಸಿ ತಾಲ್ಲೂಕಿನ 125 ಮಕ್ಕಳು ಹಾಗೂ ಉಳಿದ ಐದು ತಾಲ್ಲೂಕುಗಳ 125 ಮಕ್ಕಳು, 50 ಸಂಪನ್ಮೂಲ ಶಿಕ್ಷಕರು ಪಾಲ್ಗೊಳ್ಳುವರು. ಡಿ.26ರಂದು ಗ್ರಹಣ ವೀಕ್ಷಣೆಯೊಂದಿಗೆ ವಿಜ್ಞಾನ ಹಬ್ಬ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.