ADVERTISEMENT

ಭಟ್ಕಳ: ಅನಿಯಂತ್ರಿತ ವೇಗ-ನಿತ್ಯವೂ ಅಪಘಾತ

ಭಟ್ಕಳ: ಹೆದ್ದಾರಿಗೆ ಸೇರುವ ಒಳರಸ್ತೆಗಳ ಬಳಿ ಬ್ಯಾರಿಕೇಡ್ ಅಳವಡಿಕೆಗೆ ಒತ್ತಾಯ

ಮೋಹನ ನಾಯ್ಕ
Published 30 ನವೆಂಬರ್ 2021, 20:15 IST
Last Updated 30 ನವೆಂಬರ್ 2021, 20:15 IST
ಭಟ್ಕಳದ ಉಸ್ಮಾನ್ ನಗರದಲ್ಲಿರುವ ಹೆದ್ದಾರಿ ಕ್ರಾಸಿಂಗ್ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸದ ಕಾರಣ ವಾಹನಗಳು ವೇಗವಾಗಿ ಸಾಗುತ್ತಿವೆ
ಭಟ್ಕಳದ ಉಸ್ಮಾನ್ ನಗರದಲ್ಲಿರುವ ಹೆದ್ದಾರಿ ಕ್ರಾಸಿಂಗ್ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸದ ಕಾರಣ ವಾಹನಗಳು ವೇಗವಾಗಿ ಸಾಗುತ್ತಿವೆ   

ಭಟ್ಕಳ: ತಾಲ್ಲೂಕಿನ ವಿವಿಧೆಡೆ ಚತುಷ್ಪಥ ಹೆದ್ದಾರಿಗೆ ಸೇರುವ ಒಳರಸ್ತೆಗಳ ಬಳಿ ಅಪಘಾತಗಳು ಹೆಚ್ಚುತ್ತಿವೆ. ಹೆದ್ದಾರಿಯಲ್ಲಿ ಹಾಗೂ ಕೂಡುರಸ್ತೆಗಳಲ್ಲಿ ಬ್ಯಾರಿಕೇಡ್‌ಗಳಂಥ ಸುರಕ್ಷತಾ ಸಾಧನಗಳನ್ನು ಅಳವಡಿಸಬೇಕು ಎಂಬ ಕೂಗು ಬಲವಾಗುತ್ತಿದೆ.

ತಾಲ್ಲೂಕಿನ ಗೊರ್ಟೆಯಿಂದ ಬೈಲೂರು ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ 30ಕ್ಕೂ ಹೆಚ್ಚು ಕೂಡು ರಸ್ತೆಗಳಿವೆ. ತಾಲ್ಲೂಕಿನ ಮೂಡುಭಟ್ಕಳ ಹಾಗೂ ಶಂಸುದ್ದೀನ್ ವೃತ್ತದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಉಳಿದ ಕಡೆ ಕ್ರಾಸಿಂಗ್‌ಗಳಲ್ಲಿ ಸಾರ್ವಜನಿಕರು ಹೆದ್ದಾರಿ ದಾಟಿಯೇ ಸಾಗಬೇಕಾಗಿದೆ. ಆದರೆ, ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ವೇಗ ನಿಯಂತ್ರಣವಿಲ್ಲದೇ ಅಪಘಾಗಳಿಗೆ ಕಾರಣವಾಗುತ್ತಿವೆ.

ಪಟ್ಟಣದ ಮಣ್ಕುಳಿ, ಜಾಲಿ ಕ್ರಾಸ್ ಹಾಗೂ ನವಾಯತ್ ಕಾಲೊನಿಗಳ ರಸ್ತೆಗಳು ಸೇರುವಲ್ಲಿ ದಿನನಿತ್ಯ ಒಂದಲ್ಲ ಒಂದು ಅಪಘಾತಗಳಾಗುತ್ತಿವೆ. ಗಂಭೀರವಾಗಿ ಗಾಯಗೊಂಡ ಕೆಲವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ADVERTISEMENT

ಚತುಷ್ಪಥ ಕಾಮಗಾರಿಯು ಪಟ್ಟಣದಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಸದಾ ಜನನಿಬಿಡ ಪ್ರದೇಶವಾದ ರಂಗಿನಕಟ್ಟೆಯಿಂದ ನವಾಯತ್ ಕಾಲೊನಿ ತನಕ ಕಾಮಗಾರಿ ಅಪೂರ್ಣವಾಗಿದೆ. ಪಟ್ಟಣದಲ್ಲಿ ಅನೇಕ ಕಟ್ಟಡಗಳು ಇನ್ನೂ ತೆರವುಗೊಳಿಸುವುದು ಬಾಕಿ ಇವೆ. ಪರಿಹಾರದ ವ್ಯಾಜ್ಯ ನ್ಯಾಯಾಲಯದಲ್ಲಿರುವ ಕಾರಣ ಈ ತಡವಾಗುತ್ತಿದೆ ಎನ್ನಲಾಗುತ್ತಿದೆ. ಇದರ ಜೊತೆಯಲ್ಲಿ ಮೂರಿನಕಟ್ಟೆ ವಿವಾದವೂ ಬಗೆಹರಿಯದ ಕಾರಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

‘ಅಪಘಾತ ತಪ್ಪಿಸಿ’

‘ಹೆದ್ದಾರಿಯ ಅರ್ಧಂಬರ್ಧ ಕಾಮಗಾರಿಯಿಂದ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಕ್ರಾಸಿಂಗ್‌ಗಳಲ್ಲಿ ಬ್ಯಾರಿಕೇಡ್ ಹಾಕದ ಕಾರಣ ವೇಗವಾಗಿ ಬರುವ ವಾಹನಗಳಿಗೆ ವೇಗ ನಿಯಂತ್ರಿಸಲು ಸಾಧ್ಯವಾಗದೇ ಅಪಘಾತಗಳಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡು ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಶೀಘ್ರ ಕ್ರಮ ವಹಿಸಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಒತ್ತಾಯಿಸಿದ್ದಾರೆ.

–––––

* ಹೆದ್ದಾರಿಯಲ್ಲಿ ಅಪಘಾತಗಳ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಬ್ಯಾರಿಕೇಡ್‌ಗಳನ್ನು ಪುರಸಭೆಯಿಂದ ಪೂರೈಸುತ್ತೇವೆ. ಅವುಗಳ ಅಳವಡಿಕೆಗೆ ಪೊಲೀಸರ ಅನುಮತಿ ಅಗತ್ಯ.

– ಪರ್ವೇಜ್ ಕಾಶೀಂಜೀ, ಭಟ್ಕಳ ಪುರಸಭೆ ಅಧ್ಯಕ್ಷ

* ಹೆದ್ದಾರಿ ಕಾಮಗಾರಿ ಪೂರ್ಣವಾದ ನಂತರ, ಅಪಘಾತ ಪ್ರದೇಶಗಳನ್ನು ಗುರುತಿಸಿ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಯೋಜನೆ ರೂಪಿಸಿ ಸ್ಥಳೀಯ ಸಂಸ್ಥೆಗೆ ನೀಡಲಾಗುವುದು.

– ಕೆ.ಯು.ಬೆಳ್ಳಿಯಪ್ಪ, ಭಟ್ಕಳ ಡಿ.ವೈ.ಎಸ್ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.