ADVERTISEMENT

ಧರ್ಮಸ್ಥಳ ಪ್ರಕರಣ: ಅಪಪ್ರಚಾರದ ಒಳಸಂಚು ರೂಪಿಸಿದವರ ತನಿಖೆಯಾಗಲಿ

ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:09 IST
Last Updated 9 ಆಗಸ್ಟ್ 2025, 4:09 IST
<div class="paragraphs"><p>ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ಜಿಲ್ಲಾ ಘಟಕದ ಹಲವಾರು ಸದಸ್ಯರು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p></div>

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ಜಿಲ್ಲಾ ಘಟಕದ ಹಲವಾರು ಸದಸ್ಯರು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

   

ಕಾರವಾರ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

‘ಅಸಂಖ್ಯ ಭಕ್ತರನ್ನು ಹೊಂದಿರುವ ಹಿಂದೂ ಧರ್ಮೀಯರ ಪಾಲಿನ ಪುಣ್ಯ ಕ್ಷೇತ್ರಕ್ಕೆ ಕಳಂಕ ತರಲು ಗಿರೀಶ ಮಟ್ಟಣ್ಣನವರ, ಮಹೆಶ ಶೆಟ್ಟಿ ತಿಮರೋಡಿ, ಟಿ. ಜಯಂತ್ ಹಾಗೂ ಇವರಿಗೆ ಬೆಂಗಾವಲಾಗಿ ನಿಂತಿರುವವರು ಸೇರಿ ಒಳಸಂಚು ನಡೆಸಿರುವ ಸಾಧ್ಯತೆ ಇದ್ದು ಸೂಕ್ತ ತನಿಖೆ ನಡೆಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ಭಕ್ತಾಭಿಮಾನಿ ವೇದಿಕೆಯ ಪ್ರಮುಖ ಎಂ.ಜಿ. ಭಟ್ ಮಾತನಾಡಿ, ‘ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಗೊಳಿಸಲು ದೊಡ್ಡಮಟ್ಟದ ಷಡ್ಯಂತ್ರವೊಂದು ನಡೆದಿದೆ. ಅದರ ಭಾಗವಾಗಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪ ಹೊರಿಸಿ, ಕ್ಷೇತ್ರದ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ’ ಎಂದರು.

ಹನುಮಂತ ಗೌಡ ಬೆಳಂಬಾರ, ‘ಸುಳ್ಳು ಆರೋಪಗಳಿಗೆ ಸರ್ಕಾರ ಬೆಲೆ ಕೊಡಬಾರದು. ಇಂಥ ಆರೋಪಗಳ ಹಿಂದಿನ ಷಡ್ಯಂತ್ರ ಏನು ಎಂಬುದನ್ನು ಬಯಲಿಗೆ ಎಳೆಯಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಗಂಗಾಧರ ಭಟ್ ಮಾತನಾಡಿ, ‘ಭಕ್ತರ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಕುಟುಂಬ ಸ್ವಸಹಾಯ ಸಂಘದ ಮೂಲಕ ಧರ್ಮಾತೀತ, ಜಾತ್ಯತೀತವಾಗಿ ಸಹಾಯ ಮಾಡಿದೆ. ಆದರೆ, ಅನಾಥ ಶವಗಳ ವಿಚಾರ ಮುಂದಿಟ್ಟು ಅವರ ಕುಟುಂಬದ ಘನತೆಗೆ ಧಕ್ಕೆ ತರುವ ಕೆಲಸ ನಡೆದಿದೆ’ ಎಂದರು.

ವೇದಿಕೆ ಪ್ರಮುಖರಾದ ಭಾಸ್ಕರ ನಾರ್ವೇಕರ್, ಉಪೇಂದ್ರ ಪೈ, ಸಂಧ್ಯಾ ಕುರ್ಡೇಕರ್, ವಿವೇಕಾನಂದ ರಾಯ್ಕರ್, ಸ್ನೇಹಾ ಮಾಂಜ್ರೇಕರ್, ರುಕ್ಮಿಣಿ ಗೌಡ ಇದ್ದರು.

ಆರೋಪ ಹೊರಿಸುವವರ ತನಿಖೆಗೆ ಒತ್ತಾಯ:

‘ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿರಂತರ ಆರೋಪ ಹೊರಿಸುತ್ತಿರುವವರ ಬಗ್ಗೆಯೂ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು. ಅವರ ಖಾತೆಗಳಿಗೆ ದೊಡ್ಡ ಮೊತ್ತದ ಹಣ ಸಂದಾಯವಾಗಿದೆ ಎಂಬ ದೂರುಗಳಿದ್ದು ಈ ಮೂಲಗಳ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.