ADVERTISEMENT

ಅನರ್ಹ ಪಟ್ಟ ತೊಳೆದುಕೊಳ್ಳಲು ಸಾಧ್ಯವಾಗದು

ಕಲ್ಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಟೀಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 13:56 IST
Last Updated 23 ನವೆಂಬರ್ 2019, 13:56 IST
ಶಿರಸಿ ತಾಲ್ಲೂಕಿನ ಕಲ್ಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು
ಶಿರಸಿ ತಾಲ್ಲೂಕಿನ ಕಲ್ಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು   

ಶಿರಸಿ: ‘ಅಧಿಕಾರದ ಸಲುವಾಗಿ ಪಕ್ಷಾಂತರ ಮಾಡುವುದು ಅಕ್ಷಮ್ಯ. ಯಾರು ಏನೇ ಮಾಡಿದರೂ, ನೂರಾರು ಕೋಟಿ ಖರ್ಚು ಮಾಡಿದರೂ ಅನರ್ಹತೆಯ ಪಟ್ಟವನ್ನು ಯಾವತ್ತೂ ತೊಳೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಅನರ್ಹ ಶಾಸಕರನ್ನು ಟೀಕಿಸಿದರು.

ತಾಲ್ಲೂಕಿನ ಕಲ್ಲಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ನಾನು ಕೂಡ ಈ ಹಿಂದೆ ಪಕ್ಷಾಂತರ ಮಾಡಿದ್ದೇನೆ. ಆದರೆ, ಕಾಂಗ್ರೆಸ್ ಸೇರುವಾಗ ಕಾರ್ಯಕರ್ತನಾಗಿ ಹೋಗಿದ್ದೆ. ಅಧಿಕಾರದ ಉದ್ದೇಶ ಇಟ್ಟುಕೊಂಡು ಹೋಗಿರಲಿಲ್ಲ’ ಎಂದರು.

‘ಕ್ಷೇತ್ರದ ಅಭಿವೃದ್ಧಿ, ಬಡವರ ಕಲ್ಯಾಣಕ್ಕಾಗಿ ಈ ಉಪಚುನಾವಣೆ ನಡೆಯುತ್ತಿಲ್ಲ. ಬಿಜೆಪಿ ಅಧಿಕಾರ ದಾಹಕ್ಕಾಗಿ ನಡೆಯುತ್ತಿರುವ ಚುನಾವಣೆ ಇದಾಗಿದೆ. ಚುನಾವಣೆ ಪೂರ್ವದಲ್ಲೇ ಅನರ್ಹರಾದವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ, ಜನರ ಮತ ಸೆಳೆಯಲು ನೋಡುತ್ತಿದ್ದಾರೆ. ಹೀಗಾಗಿ, ಅಧಿಕಾರ ದುರುಪಯೋಗಪಡಿಸಿಕೊಂಡವರಿಗೆ ಸುಪ್ರೀಂ ಕೋರ್ಟ್ ನೀಡಿದ ಅನರ್ಹತೆಯ ತೀರ್ಪನ್ನೇ ಮತದಾರರು ಕೂಡ ನೀಡಬೇಕು’ ಎಂದು ಹೇಳಿದರು.

ADVERTISEMENT

ಅತಿವೃಷ್ಟಿಯಿಂದ ರಾಜ್ಯ ನಲುಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಎಚ್ಚರವಿಲ್ಲ. ಈ ಸಂದರ್ಭದಲ್ಲಿ ಏಕಾಏಕಿ ಚುನಾವಣೆ ಬಂದಿದೆಯೆಂದರೆ ಜನರು ನಂಬುವ ಸ್ಥಿತಿಯಲ್ಲಿಲ್ಲ. ಸಾರ್ವತ್ರಿಕ ಚುನಾವಣೆ ನಡೆದು ಎರಡು ವರ್ಷದೊಳಗೆ ಮತ್ತೆ ಮತದಾರರ ಎದುರು ಹೋಗುವ ಸ್ಥಿತಿಯನ್ನು ಅನರ್ಹರು ನಿರ್ಮಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ ಮಾತನಾಡಿ, ‘ಬನವಾಸಿ ಹೋಬಳಿ ಕಾಂಗ್ರೆಸ್ ಭದ್ರಕೋಟೆ. ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬಲ ನೀಡಿದ್ದ ಈ ಬ್ಲಾಕ್‌ನಲ್ಲಿ ಇನ್ನಷ್ಟು ಹೆಚ್ಚು ಮತ ಈ ಬಾರಿ ಸಿಗಲಿದೆ’ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ, ಪ್ರಮುಖರಾದ ಸುಧೀರ್ ಗೌಡ, ಎಸ್.ಟಿ.ಹೆಗಡೆ, ಕೆ.ಜಿ.ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.