ADVERTISEMENT

ಕಾರವಾರ: ಆಪತ್ಕಾಲದ ರಕ್ಷಕ ಜಿಲ್ಲಾ ಆಸ್ಪತ್ರೆ

ಕೋವಿಡ್ 19 ಪೀಡಿತರ ಚಿಕಿತ್ಸೆಗೆ ಸಕಲ ಸಿದ್ಧತೆ: ಸಾಮಾನ್ಯ ರೋಗಿಗಳಿಗೂ ಆರೈಕೆ

ಸದಾಶಿವ ಎಂ.ಎಸ್‌.
Published 9 ಏಪ್ರಿಲ್ 2020, 19:45 IST
Last Updated 9 ಏಪ್ರಿಲ್ 2020, 19:45 IST
ಕಾರವಾರದ ಜಿಲ್ಲಾ ಆಸ್ಪತ್ರೆಯ ಹೊರನೋಟ
ಕಾರವಾರದ ಜಿಲ್ಲಾ ಆಸ್ಪತ್ರೆಯ ಹೊರನೋಟ   

ಕಾರವಾರ: ಒಂದೆಡೆ ಕರಾವಳಿ, ಮತ್ತೊಂದೆಡೆ ದಟ್ಟಕಾಡಿನ ಮಲೆನಾಡಿನ ಉತ್ತರ ಕನ್ನಡದಲ್ಲಿಆರೋಗ್ಯ ಸೇವೆಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನೇ ಜನರು ನೆಚ್ಚಿಕೊಂಡಿದ್ದಾರೆ. ಒಂದೆರಡು ಕೊರತೆಗಳಿದ್ದರೂ ಸೂಕ್ತ ಚಿಕಿತ್ಸೆ ಲಭಿಸುತ್ತಿದೆಎಂಬ ಸಂತೃಪ್ತಿ ಬಹುತೇಕರದ್ದು.

ಸರ್ಕಾರಿ ಆಸ್ಪತ್ರೆಗಳು ಕೊರೊನಾ ವೈರಸ್‌ನಂತಹ ಆರೋಗ್ಯ ತುರ್ತು ಸ್ಥಿತಿಯಲ್ಲಿ ಕೂಡ ಜನರ ಆರೋಗ್ಯ ಸೇವೆಗಳಿಗೆ ಕುಂದು ಉಂಟಾಗದಂತೆ ನೋಡಿಕೊಳ್ಳುವ ಹೊಣೆ ಹೊತ್ತಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆ, ತುರ್ತು ಚಿಕಿತ್ಸೆ, ಸಾಮಾನ್ಯ ಶೀತ ಜ್ವರಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿದೆ.

ಕಾರವಾರದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿಕೊರೊನಾ ವೈರಸ್ ಮಟ್ಟಹಾಕಲು ಅಗತ್ಯವಾದ ಸಿದ್ಧತೆಗಳನ್ನುಜಿಲ್ಲಾಡಳಿತದ ಸಹಯೋಗದಲ್ಲಿ ಮಾಡಿಕೊಳ್ಳಲಾಗಿದೆ.

ADVERTISEMENT

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ‘ಅಪೆಂಡಿಕ್ಸ್, ಹರ್ನಿಯಾ, ಮಧುಮೇಹ, ಹೃದ್ರೋಗ ಮುಂತಾದ ಸಾಮಾನ್ಯ ಆರೋಗ್ಯ ಪ್ರಕರಣಗಳನ್ನೂ ನಿಭಾಯಿಸುತ್ತಿದ್ದೇವೆ. ಕೊರೊನಾ ಸಂದರ್ಭದಲ್ಲಿ ಅನುಕೂಲವಾಗುವಂತೆ ಆಸ್ಪತ್ರೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ.ಹೊರರೋಗಿಗಳಿಗೆ ಮಹಿಳೆಯರು ಮತ್ತು ಪುರುಷರಿಗೆಪ್ರತ್ಯೇಕ ತಪಾಸಣಾ ವಿಭಾಗ ಆರಂಭಿಸಲಾಗಿದೆ. ಮಕ್ಕಳ ವಿಭಾಗವನ್ನೂ ಬೇರೆಯದೇ ಮಾಡಲಾಗಿದೆ. ಇದಕ್ಕೆ ಅನುಕೂಲವಾಗುವಂತೆ ಸಿಬ್ಬಂದಿಯನ್ನು ಹೊಂದಿಸಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ25 ಹಾಸಿಗೆಗಳ ಕ್ವಾರಂಟೈನ್ ಐಸೋಲೇಷನ್ ವಾರ್ಡ್ ಮಾಡಲಾಗಿದೆ. ಕೋವಿಡ್ 19 ದೃಢಪಟ್ಟ ರೋಗಿಗಳ ಚಿಕಿತ್ಸೆಗೆ10 ಹಾಸಿಗೆಗಳ ತೀವ್ರ ನಿಗಾ ಘಟಕ ಸಿದ್ಧಪಡಿಸಲಾಗಿದೆ. ಫೀವರ್ ಕ್ಲಿನಿಕ್ ಕೂಡ ಇದೆ. ಆಸ್ಪತ್ರೆಯ ಅಧೀನದಲ್ಲಿರುವ ಜಾಗದಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು ಪುನರ್ ನಿರ್ಮಾಣ ಮಾಡಲಾಗಿದೆ’ ಎಂದು ತಿಳಿಸಿದರು.

‘ಪೋರ್ಟಬಲ್ ಎಕ್ಸ್‌ರೇ ಯಂತ್ರ ಈಗಾಗಲೇ ಮೂರು ಇದ್ದವು. ಇನ್ನೂ ಮೂರು ಖರೀದಿಗೆ ಆದೇಶ ನೀಡಲಾಗಿದ್ದು, ಶನಿವಾರ ಸಿಗಲಿದೆ. ಔಷಧವನ್ನು ಜಿಲ್ಲಾಡಳಿತ ಖರೀದಿಸಿದೆ. ಈಗಿನ ಸೌಲಭ್ಯದಲ್ಲಿ 200 ಕೋವಿಡ್ 19 ರೋಗಿಗಳು ಬಂದರೂ ಚಿಕಿತ್ಸೆ ನೀಡಲು ಸಾಧ್ಯವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ನೌಕಾಪಡೆಯ ಐ.ಎನ್.ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

11 ವೆಂಟಿಲೇಟರ್:‘ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಮೂರು ವೆಂಟಿಲೇಟರ್‌ಗಳಿದ್ದವು. ಇನ್ಫೊಸಿಸ್‌ ಫೌಂಡೇಷನ್‌ನಿಂದ ಸುಧಾಮೂರ್ತಿಅವರು ಮೂರು ವೆಂಟಿಲೇಟರ್ ಕೊಟ್ಟಿದ್ದಾರೆ. ಜಿಲ್ಲಾಡಳಿತ ಖರೀದಿಸಿದ ಐದು ವೆಂಟಿಲೇಟರ್‌ಗಳು ಶುಕ್ರವಾರ ರಾತ್ರಿ ಆಸ್ಪತ್ರೆಗೆ ತಲುಪಲಿವೆ. ಇದರೊಂದಿಗೆ ಒಟ್ಟು 11 ವೆಂಟಿಲೇಟರ್‌ಗಳು ಲಭ್ಯವಾಗುತ್ತವೆ’ ಎಂದು ಡಾ.ಶಿವಾನಂದ ಕುಡ್ತಲಕರ್ ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯ‌ಲ್ಲಿ ಸೌಲಭ್ಯ

100ಕ್ಕೂ ಅಧಿಕ:ಎಂ.ಬಿ.ಬಿ.ಎಸ್. ವೈದ್ಯರು

110:ನರ್ಸ್‌ಗಳು

250:ಇತರ ಸಿಬ್ಬಂದಿ

200: ಈಗ ನಿತ್ಯವೂ ಬರುವ ರೋಗಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.