ಕಾರವಾರ: ದೀಪಗಳ ಹಬ್ಬವಾಗಿ ಸಂಭ್ರಮ ಹೆಚ್ಚಿಸುವ ದೀಪಾವಳಿಗೆ ಮದುವೆ ಮೂಲಕ ಹಬ್ಬವನ್ನು ಸ್ಮರಣೀಯವಾಗಿಸುವ ಪರಂಪರೆ ಕರಾವಳಿ ಭಾಗದ ಕಾರವಾರದಲ್ಲಿ ನೆಲೆಸಿದ ಹಾಲಕ್ಕಿ ಸಮುದಾಯದಲ್ಲಿ ರೂಢಿಗತವಾಗಿದೆ.
ಮಂತ್ರ, ಗಟ್ಟಿ ಮೇಳದ ಬದಲು ಜನಪದ ಹಾಡು, ತಟ್ಟೆ ಬಡಿಯುತ್ತಲೇ ವಧು–ವರರನ್ನು ಪರಸ್ಪರ ಕೈಹಿಡಿಯುವಂತೆ ಮಾಡುವ ವಿಶಿಷ್ಟ ಆಚರಣೆ ದೀಪಾವಳಿ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ನಡೆಯುತ್ತದೆ. ಹೀಗೆ ಆಚರಣೆಯಲ್ಲಿ ವಧು ಮತ್ತು ವರ ಇಬ್ಬರೂ ಪುರುಷರೇ ಆಗಿರುವುದು ಇನ್ನೊಂದು ವಿಶೇಷ.
ಕಾರವಾರದ ಅಲಿಗದ್ದಾ, ಬಿಣಗಾ, ಸಾಣೆಮಕ್ಕಿ, ಮುದಗಾ ದೇವತಕೋಣ, ಸಕಲಬೇಣ, ತೋಡೂರ, ಬರಗಾಲ, ಶಿರವಾಡ ಮತ್ತಿತರ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ದಿನ ವಿಶೇಷ ಮದುವೆ ನೆರವೇರುತ್ತದೆ. ಮದುವೆ ಸುಮ್ಮನೆ ನಡೆಯುವುದಿಲ್ಲ. ಆಯಾ ಗ್ರಾಮದಲ್ಲಿ ಯಾವುದಾದರೂ ಒಂದು ಕುಟುಂಬ ಮದುವೆ ನೆರವೇರಿಸಿಕೊಡುವ ಹರಕೆ ಹೊತ್ತಿರುತ್ತದೆ. ಹೀಗೆ ಹರಕೆ ಹೊತ್ತವರು ದೀಪಾವಳಿ ವೇಳೆ ಮದುವೆ ಸಂಪ್ರದಾಯ ನೆರವೇರಿಸಬೇಕಾಗುತ್ತದೆ.
ಬಲಿಪಾಡ್ಯಮಿ ದಿನ ಗೋವುಗಳಿಗೆ ಪೂಜೆ ಮಾಡಿ, ಕಡುಬು ಕಟ್ಟಿ ಕೊಟ್ಟಿಗೆಯಿಂದ ಬಿಡುತ್ತಾರೆ. ರಾತ್ರಿಯಾಗುತ್ತಿದ್ದಂತೆಯೇ ಗ್ರಾಮಸ್ಥರೆಲ್ಲರೂ ಊಟ ಮುಗಿಸಿ ಊರಿನ ಮುಖಂಡ ಅಥವಾ ಗುನಗ (ಪೂಜಾರಿ) ಅವರ ಮನೆಯಲ್ಲಿ ಸೇರುತ್ತಾರೆ. ಇಲ್ಲಿಂದ ಮದುವೆ ಸಡಗರ ಪ್ರಾರಂಭವಾಗುತ್ತದೆ.
ಮೊದಲು ಮಹಿಳೆಯರೆಲ್ಲ ಸೇರಿ ಪ್ರತ್ಯೇಕ ಗುಂಪು ರಚಿಸಿಕೊಳ್ಳುತ್ತಾರೆ. ಜನಪದ ಗೀತೆಯ ಮೂಲಕ ಹೆಣ್ಣು ಕೇಳುವ ಶಾಸ್ತ್ರ ನಡೆಯುತ್ತದೆ. ಬೇರೆ ಬೇರೆ ಬಳಗದ ಇಬ್ಬರು ಅವಿವಾಹಿತ ಯುವಕರನ್ನು ಮದುಮಕ್ಕಳಾಗಿ ಆಯ್ಕೆಮಾಡಲಾಗುತ್ತದೆ. ವರನಾಗುವವನಿಗೆ ಬಲೀಂದ್ರ ಹಾಗೂ ವಧು ಆಗುವವನಿಗೆ ಗೃಹದೇವಿ ಎಂದು ಕರೆಯುತ್ತಾರೆ. ಮದುವೆ ನಿಶ್ಚಯವಾದ ಖುಷಿಯಲ್ಲಿ ಎಲ್ಲರೂ ರಾತ್ರಿಯೆಲ್ಲಾ ಕುಣಿಯುತ್ತ ಜಾಗರಣೆ ಮಾಡುತ್ತಾರೆ.
ಬೆಳಗಿನ ಜಾವ ಸುಮಾರು 4 ಗಂಟೆ ವರೆಗೆ ಮದುವೆಯ ನೆಪದ ಹಾಸ್ಯ ಪ್ರಹಸನ ನಡೆಯುತ್ತದೆ. ನಂತರ ಮಹಿಳೆಯರೆಲ್ಲ ಸೇರಿ ‘ತೈ ತೈ ತೋ... ಕಾಕ್ದಂಡೆ ಬಳ್ಳಿ ಬಾಸಿಂಗಾ... ಸೋರೆಕಾಯಿ ಎಲೆ ಬೀಸಣಿಗಿ; ತೈ ತೈ ತೋ... ತೈ ತೈ ತೋ...’ ಎಂದು ತಮ್ಮದೇ ಧಾಟಿಯಲ್ಲಿ ಹಾಡುತ್ತ ವಧು–ವರರನ್ನು ಮದುವೆಗೆ ಸಿದ್ಧಗೊಳಿಸುತ್ತಾರೆ.
ಮದುವೆ ದಿಬ್ಬಣ ಮೊದಲು ಅವರ ಮನೆಯ ದನದ ಕೊಟ್ಟಿಗೆಗೆ ಹೋಗುತ್ತದೆ. ಅಲ್ಲಿ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಿ, ಹರಕೆ ಹೊತ್ತವರ ಮನೆಯಲ್ಲಿ ಸೋರೆಕಾಯಿ ಪಲ್ಯದ ಊಟ ಮಾಡಿ ಗುನಗರ ಮನೆಗೆ ದಿಬ್ಬಣ ಹಿಂತಿರುಗುತ್ತದೆ. ಅಲ್ಲಿಂದ ಗ್ರಾಮದೇವರ ದೇವಸ್ಥಾನದ ಕಡೆ ದಿಬ್ಬಣ ಸಾಗುತ್ತದೆ.
ನವ ಜೋಡಿಯನ್ನು ದೇವರ ಎದುರು ನಿಲ್ಲಿಸಿ ಇಬ್ಬರ ನಡುವೆ ಪರದೆ ಹಿಡಿಯಲಾಗುತ್ತದೆ. ಗುನಗರು ಹಿಂದೂ ಸಂಪ್ರದಾಯದಂತೆ ಮದುವೆ ಶಾಸ್ತ್ರ ನಡೆಸುತ್ತಾರೆ. ಸೂರ್ಯೋದಯದ ಗೋಧೂಳಿ ಲಗ್ನದ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನೆರವೇರುತ್ತದೆ.
ನೂತನ ದಂಪತಿಗಳ ಬಾಸಿಂಗ ಬಿಚ್ಚಿ ಮದುವೆ ಮುಕ್ತಾಯ ಮಾಡಲಾಗುತ್ತದೆ. ಮದುವೆಗೆ ಬಂದವರು ಮನೆಗೆ ಮರಳುವಾಗ ಕಡ್ಡಾಯವಾಗಿ ಅಗ್ನಿಯನ್ನು ದಾಟಿ ಹಿಂತಿರುಗಿ ನೋಡದೇ ಹೋಗಬೇಕು, ಇಲ್ಲವಾದರೆ ಶಾಪ ಅಂಟುತ್ತದೆ ಎನ್ನುವುದು ನಂಬಿಕೆ. ಈ ಮದುವೆ ಹಬ್ಬಕ್ಕಷ್ಟೇ ಸೀಮಿತವಾಗಿದ್ದು, ಇದರ ನಂತರವೇ ಊರಿನಲ್ಲಿ ಮಂಗಳಕಾರ್ಯಗಳು ಪ್ರಾರಂಭವಾಗುತ್ತವೆ.
ಅವಲಕ್ಕಿ ಭೋಜನ ಹಾಲಕ್ಕಿಗಳ ವಿಶಿಷ್ಟ ಮದುವೆಯಲ್ಲಿ ಪಾಲ್ಗೊಂಡವರು ನವ ದಂಪತಿಗೆ ಹಳೆಯ ಪಾತ್ರೆ ಒಡೆದ ಬಿಂದಿಗೆ ಹರಕು ಚೀಲ ಮಾವಿನ ಎಲೆ ಕಲ್ಲು ಕಾಗದದ ಪೊಟ್ಟಣದಂತಹ ವಸ್ತುಗಳನ್ನು ಉಡುಗೊರೆ ನೀಡಿ ತಮಾಷೆ ಮಾಡುತ್ತಾರೆ. ಉಡುಗೊರೆ ಸಲ್ಲಿಕೆ ಬಳಿಕ ಎಲ್ಲರಿಗೂ ಅವಲಕ್ಕಿ ಹಂಚಲಾಗುತ್ತದೆ. ಇದನ್ನೇ ಮದುವೆಯ ಭೋಜನ ಎಂದು ಪರಿಗಣಿಸಲಾಗುತ್ತದೆ. ಒಟ್ಟಾರೆಯಾಗಿ ವಿಡಂಬನೆಯೊಟ್ಟಿಗೆ ಸಂಪ್ರದಾಯ ಆಚರಿಸುವ ಪರಿಪಾಠವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.