ADVERTISEMENT

ಆರೋಗ್ಯಭಾಗ್ಯ ಕಾಣದ ಕುಗ್ರಾಮ ವಾಸಿಗಳು

ನೇಮಕಾತಿ ಆದೇಶವಾದರೂ ಮೆಣಸಿ ಆಸ್ಪತ್ರೆಗೆ ಬಾರದ ವೈದ್ಯರು

ಗಣಪತಿ ಹೆಗಡೆ
Published 27 ಜುಲೈ 2021, 4:22 IST
Last Updated 27 ಜುಲೈ 2021, 4:22 IST
ಶಿರಸಿ ತಾಲ್ಲೂಕಿನ ಮೆಣಸಿಯ ಪ್ರಾಥಮಿಕ ಆರೋಗ್ಯ ಕೇಂದ್ರ
ಶಿರಸಿ ತಾಲ್ಲೂಕಿನ ಮೆಣಸಿಯ ಪ್ರಾಥಮಿಕ ಆರೋಗ್ಯ ಕೇಂದ್ರ   

ಶಿರಸಿ: ಹತ್ತು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಿದೆ. ಏಳು ಎಂಟು ಗ್ರಾಮಗಳ ಜನರಿಗೆ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಗೆ ಆಸ್ಪತ್ರೆ ಸಮೀಪವೂ ಇದೆ. ಆದರೆ, ಚಿಕಿತ್ಸೆಗೆ ಬೇಕಿರುವ ವೈದ್ಯರೇ ಇಲ್ಲ!

ಇದು ತಾಲ್ಲೂಕಿನ ಮೆಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಯಿಲೆ ಸ್ಥಿತಿ. ವರ್ಷದಿಂದಲೂ ಸಮಸ್ಯೆ ಮುಂದುವರೆದಿದೆ. ಜೂನ್‍ನಲ್ಲಿ ಆಸ್ಪತ್ರೆಗೆ ಎಂ.ಬಿ.ಬಿ.ಎಸ್. ವೈದ್ಯರೊಬ್ಬರನ್ನು ನೇಮಿಸಿತ್ತು. ಅವರು ನಿಗದಿತ ಸಮಯಮಿತಿಯಲ್ಲಿ ಹಾಜರಾಗದ ಪರಿಣಾಮ ಆದೇಶ ರದ್ದುಗೊಂಡಿದೆ.

ತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರದ ಜಡ್ಡಿಗದ್ದೆ ಗ್ರಾಮದಲ್ಲಿ ಆಸ್ಪತ್ರೆಯಿದೆ. ಒಂದೂವರೆ ವರ್ಷದ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹತ್ತು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಕಟ್ಟಡ, ಅಗತ್ಯ ಸೌಲಭ್ಯ ಒದಗಿಸಲಾಗಿದ್ದರೂ ಮುಖ್ಯವಾಗಿ ಬೇಕಿದ್ದ ವೈದ್ಯರಿಲ್ಲದೆ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.

ADVERTISEMENT

ಕೊಡ್ನಗದ್ದೆ, ಮೆಣಸಿ, ಬಾಳೆಕಾಯಿಮನೆ, ಕಂಚಿಗದ್ದೆ, ಸೊಣಗಿನಮನೆ ಸೇರಿದಂತೆ ಹಲವು ಗ್ರಾಮಗಳ ಜನರು ಅನಾರೋಗ್ಯ ಕಾಡಿದರೆ ಇದೇ ಆಸ್ಪತ್ರೆಗೆ ಬರಬೇಕಿದೆ. ಈ ಭಾಗದಲ್ಲಿ ಕುಗ್ರಾಮಗಳ ಸಂಖ್ಯೆ ಅಧಿಕವಾಗಿದೆ. ಮಳೆಗೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಪ್ರಮಾಣವೂ ಹೆಚ್ಚಿದೆ. 2,700ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮದಲ್ಲಿ ಬಹುತೇಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿದ್ದಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ದೂರದ ನಗರಕ್ಕೆ ಬರುವುದು ಕಷ್ಟವಾಗಿದೆ.

‘ಗ್ರಾಮದಲ್ಲಿ ಆಸ್ಪತ್ರೆಗೆ ದೊಡ್ಡ ಕಟ್ಟಡ ನಿರ್ಮಿಸಿದ್ದಾರೆ. ಆದರೆ ವೈದ್ಯರನ್ನು ನೇಮಿಸಿಲ್ಲ. ಇದರಿಂದ ನಮಗೆ ಯಾವ ಪ್ರಯೋಜನವೂ ಇಲ್ಲ. ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಪಡೆಯಲು ಸಾವಿರಾರು ರೂಪಾಯಿ ಖರ್ಚು ಮಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಸೊಣಗಿನಮನೆಯ ವೆಂಕು ಗೌಡ.

‘ವೈದ್ಯರನ್ನು ನೇಮಿಸಿ ಎಂದು ಹಲವು ಬಾರಿ ಆರೋಗ್ಯ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ವೈದ್ಯರು ಉಳಿದುಕೊಳ್ಳಲು ವಸತಿಗೃಹ ನಿರ್ಮಿಸಲಾಗಿದೆ. ಕಾಯಂ ವೈದ್ಯರೊಬ್ಬರು ಇಲ್ಲಿರಬೇಕೆಂಬ ಆಗ್ರಹವಿತ್ತು. ಆರೋಗ್ಯ ಸೇವೆ ಗ್ರಾಮದ ಬಡ ಜನರ ಪಾಲಿಗೆ ಮರಿಚೀಕೆಯಾಗುತ್ತಿದ್ದು, ತುರ್ತಾಗಿ ಎಂಬಿಬಿಎಸ್ ಪದವಿ ಪಡೆದ ವೈದ್ಯರನ್ನು ನೇಮಿಸಿದರೆ ಅನುಕೂಲ’ ಎಂದು ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ ಹೆಗಡೆ ಆಗ್ರಹಿಸಿದರು.

ವಿಪರೀತ ಮಳೆಯಿಂದ ಕಾಯಿಲೆಗೆ ತುತ್ತಾದವರನ್ನು 35–40 ಕಿ.ಮೀ. ದೂರದ ಪೇಟೆಗೆ ಒಯ್ಯುವ ಸ್ಥಿತಿ ಉಂಟಾಯಿತು. ವೈದ್ಯರಿದ್ದರೆ ಈ ಸಮಸ್ಯೆ ತಪ್ಪುತ್ತಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.