ADVERTISEMENT

ಮುಗಳಿ ಕಡಲಧಾಮದಲ್ಲಿ ಡಾಲ್ಫಿನ್ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 16:20 IST
Last Updated 17 ಸೆಪ್ಟೆಂಬರ್ 2023, 16:20 IST
   

ಕಾರವಾರ: ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ವ್ಯಾಪ್ತಿಯ ಟೊಂಕ ಕಡಲತೀರದಲ್ಲಿ ಭಾನುವಾರ ಅಳಿವಿನಂಚಿನ ಇಂಡೊ ಫೆಸಿಫಿಕ್ ಹಂಪ್ ಬ್ಯಾಕ್ ತಳಿಯ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಅಲ್ಲದೆ ಕಡಲತೀರದುದ್ದಕ್ಕೂ ನೂರಾರು ಬ್ಲ್ಯೂ ಬಟನ್ ಜೆಲ್ಲಿ ಫಿಶ್ ಕಳೆಬರಗಳೂ ಬಿದ್ದಿದ್ದವು.

ಮಧ್ಯ ವಯಸ್ಸಿನ ಹೆಣ್ಣು ಡಾಲ್ಫಿನ್ ಇದಾಗಿದೆ. ವಾರದ ಅವಧಿಯಲ್ಲಿ ಮೂರು ತಿಮಿಂಗಲಗಳ ಕಳೆಬರ ಸಿಕ್ಕ ಪ್ರದೇಶದಲ್ಲಿ ಡಾಲ್ಫಿನ್ ಕಳೆಬರವೂ ಸಿಕ್ಕಿರುವುದು ಕಡಲಜೀವಿ ತಜ್ಞರನ್ನು ಚಿಂತೆಗೆ ಈಡುಮಾಡಿದೆ.

‘ಮುಗಳಿ ಕಡಲಧಾಮ ಸೂಕ್ಷ್ಮ ಪ್ರದೇಶವಾಗಿದ್ದು, ಅಳಿವಿನಂಚಿನಲ್ಲಿರುವ ಕಡಲಜೀವಿ ಪ್ರಭೇದಗಳು ಸಂತಾನೋತ್ಪತ್ತಿಗೆ ಬರುತ್ತವೆ. ಅಂತಹ ಜೀವಪ್ರಭೇದಗಳ ಕಳೆಬರ ಪದೇ ಪದೇ ಪತ್ತೆಯಾಗುತ್ತಿರುವುದನ್ನು ಅರಣ್ಯ ಇಲಾಖೆ ಗಂಭಿರವಾಗಿ ಪರಿಗಣಿಸಬೇಕು’ ಎಂದು ಕಡಲಜೀವ ವಿಜ್ಞಾನಿ ಪ್ರಕಾಶ ಮೇಸ್ತ ಒತ್ತಾಯಿಸಿದ್ದಾರೆ.

ADVERTISEMENT

‘ಬ್ಲ್ಯೂ ಬಟನ್ ಜೆಲ್ಲಿ ಫಿಶ್‍ಗಳ ಕಳೆಬರವೂ ಕಡಲತೀರದಲ್ಲಿ ಹರಡಿಕೊಂಡಿದೆ. ವಿಷಕಾರಿ ಮೀನು ಸೇವನೆಯಿಂದ ಡಾಲ್ಫಿನ್ ಮೃತಪಟ್ಟಿರುವ ಸಾಧ್ಯತೆಯೂ ಇದೆ. ಆದರೆ ಸ್ಪಷ್ಟತೆ ಇಲ್ಲ’ ಎಂದರು.

‘ಡಾಲ್ಫಿನ್ ಕಳೆಬರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವಷ್ಟೆ ಕಾರಣ ತಿಳಿಯಬಹುದು’ ಎಂದು ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.